ಭಾರತದ ಇತಿಹಾಸದ ಅಂಬೇಡ್ಕರ್‌ವಾದಿ ವಿಶ್ಲೇಷಣೆ

Update: 2019-08-19 18:30 GMT

ಭಾರತದ ಇತಿಹಾಸ ಅದು ಹೇಗಿದೆ ಎಂದು ಯಾರಾದರೂ ತಾವು ಕಲಿತದ್ದನ್ನು ನೆನಪಿಸಿಕೊಂಡರೆ ಅಥವಾ ಕಲಿಯಲು ಹೊರಟರೆ ಅವರಿಗೆ ತಿಳಿದುಬರುವುದು ಬರೀ ಮುಸ್ಲಿಂ ಆಕ್ರಮಣಕಾರರ ದಾಳಿಯ ಅನುಕ್ರಮಣಿಕೆ ಎಂಬುದು. ನಿಜ, ಅಲ್ಲಿ ತದನಂತರ ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಹೀಗೆ ವಿದೇಶಿ ದಾಳಿಕೋರರ ದಾಖಲೀಕರಣವೂ ಇದೆ. ಆದರೆ ಅತಿ ಮಹತ್ವದ್ದಾಗಿ ಅಂದರೆ ಎರಡು ಅಥವಾ ಎರಡೂವರೆ ಸಾವಿರ ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಕಾಣಬರುವುದೆಂದರೆ ಅಥವಾ ಕಾಣಿಸಲ್ಪಡುವುದೆಂದರೆ ಅದು ಮುಸ್ಲಿಂ ಆಕ್ರಮಣ ಮತ್ತು ದಾಳಿಗಳು. ಯಾಕೆ ಹೀಗೆ? ಈ ನಿಟ್ಟಿನಲ್ಲಿ ಹೇಳುವುದಾದರೆ ಭಾರತದ ಇತಿಹಾಸದ ಈ ಬಗೆಯ ದಾಖಲೀಕರಣವೇ ತಪ್ಪುಎಂಬುದು.

ಹೇಗೆ? ಅಂಬೇಡ್ಕರ್‌ರವರ ಸಂಶೋಧನಾಭರಿತ ಬರಹಗಳ (ಇಂಗ್ಲಿಷ್ ಸಂ.3, ಪು.275) ಆಧಾರದ ಮೇಲೆ ಹೇಳುವುದಾದರೆ ಭಾರತದ ಇತಿಹಾಸ ಬರೆದಿರುವ ಅಥವಾ ದಾಖಲಿಸಿರುವ ಕಾರ್ಯವೇ ತಪ್ಪು ಮಾರ್ಗದಲ್ಲಿ ನಡೆದಿದೆ ಅಥವಾ ಕೆಲವು ತಪ್ಪುಕಲ್ಪನೆಗಳ ಹಾದಿಯಲ್ಲಿ ಅದು ಬರೆಯಲ್ಪಟ್ಟಿದೆ ಎಂಬುದು. ಹಾಗಿದ್ದರೆ ಭಾರತದ ಇತಿಹಾಸದ ದಾಖಲೀಕರಣ ಮಾಡಿಕೊಂಡ ಅಥವಾ ದಾಖಲಿಸಿದವರು ಮಾಡಿದ ಮೊದಲ ತಪ್ಪುಕಲ್ಪನೆ ಏನು? ಉತ್ತರ: ಮೊದಲನೆಯದು, ಇಡೀ ಇತಿಹಾಸದ ಉದ್ದಕ್ಕೂ ಭಾರತದ ಸಂಸ್ಕೃತಿ ಒಂದೇ ತೆರನಾಗಿತ್ತು ಎಂದುಕೊಂಡದ್ದು. ಎರಡನೆಯದು, ಭಾರತದ ರಾಜಕಾರಣದಲ್ಲಿ ನಡೆದ ಸಂಘರ್ಷಗಳೆಲ್ಲವೂ ಕೇವಲ ರಾಜಕೀಯ ಮತ್ತು ವಂಶಪರಂಪರೆಯ ಅಂಶಗಳನ್ನಷ್ಟೆ ಹೊಂದಿದ್ದವು, ಮತ್ತಾವುದೇ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಅದು ಒಳಗೊಂಡಿರಲಿಲ್ಲ ಎಂದುಕೊಂಡದ್ದು. ಸತ್ಯ, ಉದಾಹರಣೆಗೆ ಭಾರತದ ಇತಿಹಾಸ ಭಾರತವನ್ನು ಉದ್ದಕ್ಕೂ ಒಂದೇ ಸಂಸ್ಕೃತಿ ಹೊಂದಿತ್ತು ಎಂದು ಕಲ್ಪಿಸಿಕೊಂಡಿತ್ತು ಎಂಬ ಪರಿಕಲ್ಪನೆಗೆ ಪೂರಕವಾಗಿ ಹೇಳುವುದಾದರೆ ಭಾರತದ ಇತಿಹಾಸ ಬ್ರಾಹ್ಮಣಧರ್ಮ, ಬೌದ್ಧಧರ್ಮ ಮತ್ತು ಜೈನಧರ್ಮಗಳನ್ನು ತನ್ನ ಇತಿಹಾಸದ ವಿವಿಧ ಹಂತಗಳು ಎಂದುಕೊಳ್ಳಲಿಲ್ಲ! ಹಾಗೆಯೇ ಅವುಗಳ ನಡುವೆ ಯಾವುದೇ ಮೂಲಭೂತ ಸಂಘರ್ಷಗಳು ತಿಕ್ಕಾಟಗಳು ನಡೆದೇ ಇಲ್ಲ ಎಂದುಕೊಂಡದ್ದು! ಇತಿಹಾಸದ ದಾಖಲೀಕರಣದ ಇಂತಹ ತಪ್ಪು ನಡೆಯಿಂದಾಗಿ ಭಾರತದ ಇತಿಹಾಸ ಒಂದು ಯಾಂತ್ರಿಕ ಪ್ರಕ್ರಿಯೆಯಾಗಿ ದಾಖಲಾಗಿದೆ. ಹೇಗೆಂದರೆ ಒಂದು ವಂಶದ ನಂತರ ಮತ್ತೊಂದು ವಂಶ..., ಒಬ್ಬ ಆಡಳಿತಗಾರನ ನಂತರ ಮತ್ತೊಬ್ಬ ಆಡಳಿತಗಾರ... ಹೀಗೆ.

ಹಾಗಿದ್ದರೆ ಇತಿಹಾಸ ರಚಿಸಲ್ಪಟ್ಟ ಈ ಮಾದರಿಗೆ ಸೂಚಿಸಬಹುದಾದ ಅಥವಾ ಅಳವಡಿಸಬಹುದಾದ ಪರಿಹಾರ ಸಾಮಗ್ರಿಗಳು? ಮೊದಲನೆಯದು, ಭಾರತದಲ್ಲಿ ಸಾಮಾನ್ಯ ಸಂಸ್ಕೃತಿ ಎಂಬುದು ಇರಲೇ ಇಲ್ಲ ಎಂಬುದನ್ನು ಅರಿಯುವುದು. ಎರಡನೆಯದು, ಮುಸ್ಲಿಮರ ದಾಳಿಗಿಂತ ಮೊದಲಿನ ಇತಿಹಾಸ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವಿನ ಮಾರಕ ಕಾಳಗ ಎಂಬುದನ್ನು ಅರಿಯುವುದು, ಗುರುತಿಸುವುದು. ಸಾಮಾನ್ಯ ಸಂಸ್ಕೃತಿ ಇಲ್ಲ ಎಂಬುದರ ಬಗ್ಗೆ ಹೇಳುವುದಾದರೆ, ಇತಿಹಾಸದಲ್ಲಿ ಭಾರತದಲ್ಲಿ ಮೂರು ಬಗೆಯ ಭಾರತಗಳಿದ್ದವು. 1.ಬ್ರಾಹ್ಮಣ ಭಾರತ 2.ಬೌದ್ಧ ಭಾರತ 3.ಹಿಂದೂ ಭಾರತ. ಈ ಮೂರೂ ಪ್ರತಿಯೊಂದೂ ತನ್ನದೇ ಆದ ಪ್ರತ್ಯೇಕ ಸಂಸ್ಕೃತಿಗಳನ್ನು ಹೊಂದಿದ್ದವು. ಹಾಗೆಯೇ ಮುಸ್ಲಿಂ ಆಕ್ರಮಣಕ್ಕಿಂತ ಮೊದಲು ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ಮಾರಕ ಕಾಳಗ ನಡೆದಿತ್ತು ಎಂಬುದರ ಬಗ್ಗೆ ಹೇಳುವುದಾದರೆ, ಭಾರತದ ಇತಿಹಾಸದ ಈ ಪ್ರಮುಖ ಅಂಶವನ್ನು ಕಡೆಗಣಿಸಿದರೆ ಅಥವಾ ಇತಿಹಾಸ ಅಧ್ಯಯನಕಾರರು ಗುರುತಿಸುವಲ್ಲಿ ವಿಫಲರಾದರೆ ಭಾರತದ ನೈಜ ಇತಿಹಾಸ ಆ ಮೂಲಕ ಇತಿಹಾಸ ಎಂಬ ಆ ಪದದ ಅರ್ಥ ಮತ್ತು ಉದ್ದೇಶ ಈಡೇರುವುದು ಸಾಧ್ಯವೇ ಇಲ್ಲ ಎಂಬುದು.

ಈ ಅಂಶಗಳ ಬಗ್ಗೆ ಅದರಲ್ಲೂ ಭಾರತದ ಇತಿಹಾಸ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವಿನ ಸಂಘರ್ಷ ಎಂಬ ಬಗ್ಗೆ ನಾವು ತಿಳಿದುಕೊಳ್ಳುವುದಾದರೆ, ಈ ಅಂಶ ಹೆಕ್ಕುವ ಅಂಬೇಡ್ಕರ್‌ರವರ ವಿಚಾರಗಳನ್ನು ದಾಖಲಿಸುವುದಾದರೆ ಅಂಬೇಡ್ಕರ್‌ರವರು ಹೇಳುವುದು ‘‘ಭಾರತದ ಇತಿಹಾಸದಲ್ಲಿ ಭಾರತದ ಮೇಲೆ ನಡೆದಿರುವ ಮುಸ್ಲಿಮರ ದಾಳಿಯ ಅಂಶಗಳ ಬಗ್ಗೆ ಸಿಕ್ಕಾಪಟ್ಟೆ ಒತ್ತು ನೀಡಲಾಗಿದೆ. ಹಿಮಪಾತ ಉಂಟಾಗುವಾಗ ಒಂದು ಅಲೆಯಾದ ಮೇಲೆ ಮತ್ತೊಂದು ಅಲೆ ಬರುವಂತೆ ಒಟ್ಟಾರೆ ಒಂದು ಬೃಹತ್ ಹಿಮಪಾತದ ರೀತಿ ಮುಸ್ಲಿಂ ದಾಳಿಕೋರರು ಭಾರತಕ್ಕೆ ಬಂದರು, ಈ ಜನರನ್ನು ಸುತ್ತುವರಿದರು ಮತ್ತು ಇಲ್ಲಿಯ ರಾಜರನ್ನು ಕೆಳಗಿಳಿಸಿದರು... ಹೀಗೆ ರೀಲುಗಟ್ಟಲೆ ಬರೆಯಲಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಂಕುಚಿತ ದೃಷ್ಟಿಕೋನದಲ್ಲಿ ನೋಡಿದರೂ ಕೂಡ ಈ ಅಧ್ಯಯನಯೋಗ್ಯ ಇಂತಹ ದಾಳಿಗಳಲ್ಲಿ ಕೇವಲ ಮುಸ್ಲಿಂ ದಾಳಿಗಳಷ್ಟೇ ಅಲ್ಲ, ಇತರ ದಾಳಿಗಳೂ ಕೂಡ ಮಹತ್ವ ಪಡೆಯುತ್ತವೆ ಎಂಬುದು. ಹಾಗೆಯೇ ಇತರ ಆಕ್ರಮಣಗಳು, ದಾಳಿಗಳು ಅಂತಹ ಪ್ರಮುಖವಾದುವಲ್ಲ ಎನಿಸಿದರೂ ಕೂಡ ಅವು ಮುಸ್ಲಿಂ ದಾಳಿಗಳಷ್ಟೆ ಮಹತ್ವ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹಿಂದೂ ಭಾರತವನ್ನು ಮುಸ್ಲಿಂ ದಾಳಿಕೋರರು ಆಕ್ರಮಿಸಿದರೆ ಬೌದ್ಧ ಭಾರತವನ್ನು ಬ್ರಾಹ್ಮಣ ಆಕ್ರಮಣಕಾರರು ಆಕ್ರಮಿಸಿದರು.’’ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.3, ಪು.273).

ಇದೇನು? ಬ್ರಾಹ್ಮಣ ಆಕ್ರಮಣಕಾರರು? ಎಂದು ಯಾರಿಗಾದರೂ ಅನಿಸದಿರದು. ಆದರೆ ಭಾರತದ ಇತಿಹಾಸ ಇದನ್ನು ಗುರುತಿಸುವಲ್ಲಿ ವಿಫಲವಾಗಿರುವುದು ಅಥವಾ ಗುರುತಿಸದೆ ಮರೆಮಾಚಿರುವುದು ಏಕೆ ಎಂಬ ಪ್ರಶ್ನೆ ಎಂಥವರಿಗಾದರೂ ಕಾಡದಿರದು. ಹಾಗೆಯೇ ಅದಕ್ಕೆ ಉತ್ತರವೂ ಕೂಡ ಅಷ್ಟೆ ಸುಲಭವಾಗಿ ಸಿಗುತ್ತದೆ. ಇರಲಿ, ಅದನ್ನು ಮುಂದೆ ಎಂದಾದರೂ ಚರ್ಚಿಸೋಣ. ಈ ದಿಸೆಯಲ್ಲಿ ಮತ್ತೆ ಈ ಲೇಖನದ ಮುಖ್ಯ ಉದ್ದೇಶಕ್ಕೆ ಬರುವುದಾದರೆ, ಹಾಗಿದ್ದರೆ ಮುಸ್ಲಿಂ ಆಕ್ರಮಣ ಮತ್ತು ಬ್ರಾಹ್ಮಣರ ಆಕ್ರಮಣಗಳ ನಡುವೆ ಏನಾದರೂ ಸಾಮ್ಯತೆ ಇತ್ತಾ? ಅಂಬೇಡ್ಕರರ ಪ್ರಕಾರ ಎರಡು ಆಕ್ರಮಣಗಳಲ್ಲೂ ಸಾಕಷ್ಟು ಸಾಮ್ಯತೆ ಇತ್ತು. ಉದಾಹರಣೆಗೆ ತಮ್ಮ ವಂಶಪಾರಂಪರ್ಯ ಆಳ್ವಿಕೆಯ ಉಳಿಯುವಿಕೆಗಾಗಿ ಮುಸ್ಲಿಂ ಆಕ್ರಮಣಕಾರರು ಪರಸ್ಪರ ಕಾದಾಡಿದರೆ ಉದಾಹರಣೆಗೆ ಹೇಳುವುದಾದರೆ ಅರಬ್ಬರು, ಟರ್ಕರು, ಮಂಗೋಲಿಯನ್ನರು, ಅಫ್ಘನ್ನರು... ಹೀಗೆ ಪರಸ್ಪರ ಕಾದಾಡಿದರೆ ಬ್ರಾಹ್ಮಣ ಆಕ್ರಮಣಕಾರರು ಕೂಡ ಪರಸ್ಪರ ಕಾದಾಡಿದರು. ಆದರೆ ಒಂದು ವ್ಯತ್ಯಾಸವೆಂದರೆ ಮುಸ್ಲಿಮರು ಹಿಂದೂ ಭಾರತದ ಮೇಲೆ ದಾಳಿ ನಡೆಸಿದರೆ ಬ್ರಾಹ್ಮಣ ಆಕ್ರಮಣಕಾರರು ಬೌದ್ಧಧರ್ಮ ಮತ್ತು ಬೌದ್ಧ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಹಿಂದೂ ಭಾರತದ ಮೇಲೆ ಮುಸ್ಲಿಂ ಆಕ್ರಮಣಕಾರರು ನಡೆಸಿದ ದಾಳಿ ಅಧ್ಯಯನಯೋಗ್ಯವಾದುದಾದರೆ ಬೌದ್ಧ ಭಾರತದ ಮೇಲೆ ಬ್ರಾಹ್ಮಣ ಆಕ್ರಮಣಕಾರರು ನಡೆಸಿದ ದಾಳಿ ಕೂಡ ಅಷ್ಟೇ ಅಧ್ಯಯನಯೋಗ್ಯವಾದುದು.

 ಮತ್ತೂ ಮುಂದುವರಿದು ಜನತೆಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ಬೀರಿದ ಶಾಶ್ವತ ಪರಿಣಾಮಗಳ ಆಧಾರದ ಮೇಲೆ ಹೇಳುವುದಾದರೆ ಬೌದ್ಧಭಾರತದ ಮೇಲೆ ಬ್ರಾಹ್ಮಣ ಆಕ್ರಮಣಕಾರರ ದಾಳಿ ಅದೆಷ್ಟು ತೀವ್ರವಾಗಿತ್ತೆಂದರೆ ಇದಕ್ಕೆ ಹೋಲಿಸಿದರೆ ಹಿಂದೂ ಭಾರತದ ಮೇಲೆ ಮುಸ್ಲಿಮರ ಆಕ್ರಮಣ ಏನೇನೂ ಅಲ್ಲದ್ದಾಗಿತ್ತು. ನಿಜವಾಗಿ, ಆ ದಾಳಿ ಭಾರತದ ಮೇಲೆ ಕೇವಲ ಅಲ್ಪಪ್ರಮಾಣದ ತೆಳು ಪರಿಣಾಮ ಬೀರಿತ್ತಷ್ಟೆ. ಏಕೆಂದರೆ ಮುಸ್ಲಿಂ ಆಕ್ರಮಣಕಾರರು ದೇವಸ್ಥಾನಗಳು, ಮಠಗಳು... ಹೀಗೆ ಹಿಂದೂ ಧರ್ಮದ ಹೊರ ರಚನೆಗಳ ಮೇಲೆ ದಾಳಿ ನಡೆಸಿದರಷ್ಟೆ ಹೊರತು ಸಂಪೂರ್ಣ ಹಿಂದೂ ಧರ್ಮವನ್ನೇ ನಿರ್ಮೂಲನೆಗೊಳಿಸುವುದಾಗಲೀ ಅಥವಾ ಜನತೆಯ ಆಧ್ಯಾತ್ಮಿಕ ಜೀವನದ ಮೇಲೆ ಆಳವಾದ ಪರಿಣಾಮ ಬೀರಿದ್ದ ಹಿಂದೂ ಧರ್ಮದ ಶಾಸ್ತ್ರಗಳು-ಪುರಾಣಗಳು, ತತ್ವಗಳಿಗೆ ಧಕ್ಕೆಯುಂಟುಮಾಡುವ, ನಾಶಗೊಳಿಸುವ ಯಾವುದೇ ಕ್ರಿಯೆಯನ್ನು ಮಾಡಲಿಲ್ಲ.

ಆದರೆ ಇದಕ್ಕೆ ವಿರುದ್ಧವಾಗಿ ಬೌದ್ಧಧರ್ಮದ ಮೇಲೆ ನಡೆದ ಬ್ರಾಹ್ಮಣ ಆಕ್ರಮಣ ಬೌದ್ಧ ತತ್ವಗಳನ್ನು ಸಂಪೂರ್ಣವಾಗಿ ಬದಲಿಸಿತು. ಹೇಗೆಂದರೆ ಬೌದ್ಧತತ್ವ ತಮ್ಮ ಆಧ್ಯಾತ್ಮಿಕ ಜೀವನದ ಶಾಶ್ವತ ಮತ್ತು ಸತ್ಯದ ತತ್ವವೆಂದು ಜನತೆ ಶತಶತಮಾನಗಳ ಕಾಲ ಒಪ್ಪಿದ್ದನ್ನು, ಜೀವನಮಾರ್ಗವಾಗಿ ಅಳವಡಿಸಿಕೊಂಡಿದ್ದನ್ನು ಬ್ರಾಹ್ಮಣ ಆಕ್ರಮಣ ಸಂಪೂರ್ಣವಾಗಿ ನಾಶಗೊಳಿಸಿತು. ಇದನ್ನು ದಾಖಲಿಸುತ್ತಾ ಅಂಬೇಡ್ಕರ್‌ರವರು ಇದನ್ನು ನೀರಿನ ಕೊಳವೊಂದರಲ್ಲಿ ಆಟವಾಡುತ್ತಿರುವ ಒಂದು ಮಗುವಿಗೆ ಹೋಲಿಸುತ್ತಾ ಹೇಳುವುದು ‘‘ಮುಸ್ಲಿಂ ಆಕ್ರಮಣಕಾರರು ಮಗು ಆಟ ಆಡುತ್ತಿದ್ದ ಆ ನೀರಿನ ತೊಟ್ಟಿಯನ್ನು ತುಸು ಕದಡಿದರಷ್ಟೆ, ಅದೂ ಸ್ವಲ್ಪಸಮಯ. ನಂತರ ನೀರನ್ನು ಕದಡಿ ಕದಡಿ ಸುಸ್ತಾದ ಮುಸ್ಲಿಂ ಆಕ್ರಮಣಕಾರರು ಅದನ್ನು ಹಾಗೆಯೇ ಬಿಟ್ಟರು. ಪರಿಣಾಮ ಪದರ ಪದರಾಗಿ ಕಸ ತಳ ಸೇರಿಸುವ ಕೆಲಸವನ್ನಷ್ಟೆ ಅವರು ಮಾಡಿದರು. ಅಂದಹಾಗೆ ನೀರಿನಲ್ಲಿ ಆಟವಾಡುತ್ತಿದ್ದ ಮಗುವನ್ನು ಹಿಂದೂ ತತ್ವಗಳು ಎನ್ನುವುದಾದರೆ ಆ ಮಗುವನ್ನು ಹೊರಗೆಸೆಯುವ ಕ್ರಿಯೆಯನ್ನು ಮುಸ್ಲಿಂ ಆಕ್ರಮಣಕಾರರು ಎಂದಿಗೂ ಮಾಡಲಿಲ್ಲ. ದುರಂತವೆಂದರೆ ಇದಕ್ಕೆ ವಿರುದ್ಧವಾಗಿ ಬೌದ್ಧಧರ್ಮದೊಂದಿಗಿನ ತನ್ನ ಸಂಘರ್ಷದಲ್ಲಿ ಬ್ರಾಹ್ಮಣರು ಆ ನೀರಿನ ತೊಟ್ಟಿಯನ್ನು ಸಂಪೂರ್ಣ ಗುಡಿಸಿಹಾಕಿದ್ದರು. ಹೇಗೆಂದರೆ ನೀರನ್ನು ಸಂಪೂರ್ಣ ಖಾಲಿಗೊಳಿಸಿದ ಬ್ರಾಹ್ಮಣಧರ್ಮ ಅದರೊಳಗಿದ್ದ ಬೌದ್ಧ ಮಗುವನ್ನು ಹೊರತೆಗೆದು ತನ್ನ ನೀರನ್ನು ಅಲ್ಲಿ ತುಂಬಿಸಿ ತನ್ನ ಮಗುವನ್ನು ಅಲ್ಲಿ ಇಟ್ಟಿತು. ಈ ದಿಸೆಯಲ್ಲಿ ಬೌದ್ಧಧರ್ಮದಿಂದ ಹರಿದುಬಂದಿದ್ದ ಪರಿಶುದ್ಧವಾದ ಸುಗಂಧಭರಿತವಾದ ಶ್ರೇಷ್ಠ ನೀರಿಗೆ ಹೋಲಿಸಿದಾಗ ತನ್ನ ನೀರು ಅದೆಷ್ಟು ಕೊಳಕಾಗಿದೆ, ಅದೆಷ್ಟು ಗಲೀಜಾಗಿದೆ ಎಂಬುದು ತಿಳಿದಿದ್ದರೂ ಬ್ರಾಹ್ಮಣಧರ್ಮ ಅದರ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳಲಿಲ್ಲ.’’ (ಅದೇ ಕೃತಿ, ಪು.274)

 ಬ್ರಾಹ್ಮಣಧರ್ಮ ತನ್ನ ಆಕ್ರಮಣದಿಂದ ತಾನು ಗಳಿಸಿದ ರಾಜಕೀಯ ಅಧಿಕಾರವನ್ನು ಬೌದ್ಧಧರ್ಮವನ್ನು ನಾಶಗೊಳಿಸಲು ಬಳಸಿಕೊಂಡಿತು ಮತ್ತು ಹಾಗೆ ನಾಶಗೊಳಿಸಿತೂ ಕೂಡ. ಇದಕ್ಕೆ ವ್ಯತಿರಿಕ್ತವಾಗಿ ಇಸ್ಲಾಂ ಧರ್ಮ ಹಿಂದೂ ಧರ್ಮವನ್ನು ಅತಿಕ್ರಮಿಸಲಿಲ್ಲ, ಇಸ್ಲಾಂ ತನ್ನ ಯೋಜನೆಯ ಉದ್ದೇಶವನ್ನು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ತರಲಿಲ್ಲ. ಆದರೆ ಬ್ರಾಹ್ಮಣಧರ್ಮ ಕಾರ್ಯರೂಪಕ್ಕೆ ತಂದಿತು. ಒಂದು ಧರ್ಮವಾಗಿ ಅದು ಬೌದ್ಧಧರ್ಮವನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ತನ್ನ ಧರ್ಮವನ್ನು ಪ್ರತಿಷ್ಠಾಪಿಸಿತು. ಅಂದಹಾಗೆ ಇಂತಹ ಪ್ರತಿಷ್ಠಾಪನೆಯ ಕೆಲಸ ಅದು ಒಂದು ತಿಂಗಳು, ಎರಡು ತಿಂಗಳು ಅಥವಾ ಒಂದು ವರ್ಷ, ಎರಡು ವರ್ಷಗಳು ನಡೆದಿದ್ದಲ್ಲ. ಬದಲಿಗೆ ಒಂದು ಸಾವಿರ ವರ್ಷಗಳವರೆಗೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ಇಂತಹ ಸಂಘರ್ಷ ನಡೆದಿದೆ. ಕ್ರಿ.ಪೂ.185ರಲ್ಲಿ ಪುಷ್ಯಮಿತ್ರ ಶುಂಗನಿಂದ ಆರಂಭವಾದ ಇಂತಹ ಸಂಘರ್ಷ ದೇಶದ ಉದ್ದಗಲಕ್ಕೂ ಯಾಕೆಂದರೆ ಅಶೋಕನ ಕಾಲದಲ್ಲಿ(ಕ್ರಿ.ಪೂ.268-ಕ್ರಿ.ಪೂ.232) ಬೌದ್ಧಧರ್ಮ ಇಡೀ ಭಾರತವನ್ನು ಆಕ್ರಮಿಸಿತ್ತು. ದುರಂತವೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮಗಳ ನಡುವೆ ನಡೆದಿರುವ ಇಂತಹ ಸಂಘರ್ಷ ಅಥವಾ ಮಾರಕ ಕಾಳಗವನ್ನು ಭಾರತದ ಇತಿಹಾಸ ಗಮನಿಸಲೇಹೋಗಿಲ್ಲ, ದಾಖಲಿಸಲೇಹೋಗಿಲ್ಲ. ಈ ದಿಸೆಯಲ್ಲಿ ಇತಿಹಾಸದ ಈ ಮಗ್ಗುಲನ್ನು ಅಂದರೆ ಬ್ರಾಹ್ಮಣಧರ್ಮ ಮತ್ತು ಬೌದ್ಧಧರ್ಮಗಳ ನಡುವಿನ ನಿರಂತರ ಕಾಳಗವನ್ನು ಅಧ್ಯಯನ ಮಾಡದೇ ಅಥವಾ ಆ ದೃಷ್ಟಿಕೋನದಲ್ಲಿ ಭಾರತದ ಇತಿಹಾಸವನ್ನು ನೋಡದೆ ಹೋದರೆ ಭಾರತದ ಈಗಿನ ಸಾಮಾಜಿಕ ಸ್ಥಿತಿಗತಿಯನ್ನು, ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಖಂಡಿತ ಸಾಧ್ಯವಿಲ್ಲ.

Writer - ರಘೋತ್ತಮ ಹೊ.ಬ.

contributor

Editor - ರಘೋತ್ತಮ ಹೊ.ಬ.

contributor

Similar News