ಕಾಶ್ಮೀರ ವಿವಾದ: ಭಾರತ ನಿಲುವಿಗೆ ಅಫ್ಘಾನ್ ಬೆಂಬಲ

Update: 2019-08-20 04:51 GMT

ಹೊಸದಿಲ್ಲಿ/ ವಾಷಿಂಗ್ಟನ್, ಆ.20: ಕಾಬೂಲ್ ಮತ್ತು ಕಾಶ್ಮೀರದ ನಡುವೆ ಸಾಮ್ಯತೆ ತರುವ ಪಾಕಿಸ್ತಾನದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಕಾಶ್ಮೀರ ವಿಚಾರದಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ಒತ್ತಾಯಿಸುವ ಸಲುವಾಗಿ ಅಮೆರಿಕ ನೇತೃತ್ವದ ಅಫ್ಘಾನ್ ಶಾಂತಿ ಪ್ರಕ್ರಿಯೆಯನ್ನು ಬಳಸುವ ಪಾಕಿಸ್ತಾನದ ಪ್ರಯತ್ನವನ್ನು "ಅಜಾಗರೂಕ, ಅನಪೇಕ್ಷಿತ ಮತ್ತು ಬೇಜವಾಬ್ದಾರಿಯುತ" ಎಂದು ಅಪ್ಘಾನಿಸ್ತಾನ ಬಣ್ಣಿಸಿದೆ.

ಅಮೆರಿಕದಲ್ಲಿ ಅಫ್ಘಾನಿಸ್ತಾನದ ರಾಯಭಾರಿಯಾಗಿರುವ ರೋಯಾ ರಹ್ಮಾನಿಯವರಿಗೆ ಕಳೆದ ವಾರ ಪಾಕಿಸ್ತಾನಿ ರಾಯಭಾರಿ ಅಸಾದ್ ಮಜೀದ್ ಖಾನ್ ಎಚ್ಚರಿಕೆ ನೀಡಿ, ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಜತೆಗಿನ ಪಶ್ಚಿಮ ಗಡಿಯಿಂದ ಸೇನೆಯನ್ನು ಹಿಂಪಡೆಯುವುದು ಅನಿವಾರ್ಯ ಎಂದು ಹೇಳಿದ್ದರು. ಇದರ ಮುಂದುವರಿದ ಕ್ರಮವಾಗಿ ಅಫ್ಘಾನಿಸ್ತಾನ ತನ್ನ ನಿಲುವು ಸ್ಪಷ್ಟಪಡಿಸಿದೆ.

ಖಾನ್‌ಗೆ ತಿರುಗೇಟು ನೀಡಿದ ರಹ್ಮಾನಿ "ಕಾಶ್ಮೀರ, ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯ. ಇದನ್ನು ಅಮೆರಿಕ ನೇತೃತ್ವದ ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಯ ಜತೆ ಜೋಡಿಸುವ ಇಸ್ಲಾಮಾಬಾದ್‌ನ ಕ್ರಮ ಸಿನಿಕತನದ ಉದ್ದೇಶದ್ದು ಹಾಗೂ ದೇಶದಲ್ಲಿ ಹಿಂಸೆಯನ್ನು ಮುಂದುವರಿಸುವ ಉದ್ದೇಶದ್ದು ಎಂದು ಹೇಳಿದ್ದಾರೆ.

ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ 30 ನಿಮಿಷ ಕಾಲ ದೂರವಾಣಿಯಲ್ಲಿ ಚರ್ಚೆ ಮಾಡಿದ ಟ್ರಂಪ್, "ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಮತ್ತು ಈ ಭಾಗದಲ್ಲಿ ಶಾಂತಿಯನ್ನು ನಿರ್ವಹಿಸುವ ಮಹತ್ವದ ಬಗ್ಗೆ ಮನವರಿಕೆ ಮಾಡಿದ್ದಾರೆ" ಎಂದು ಶ್ವೇತಭವನ ಸೋಮವಾರ ರಾತ್ರಿ ಪ್ರಕಟನೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News