ಕೈ ತಪ್ಪಿದ ಸಚಿವ ಸ್ಥಾನ: ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಅಸಮಾಧಾನ

Update: 2019-08-20 06:21 GMT

ಬೆಂಗಳೂರು, ಆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ. ಪಕ್ಷ ನಿಷ್ಠರು, ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪ ಕೇಳಿಬರುತ್ತಿದೆ.

ಈ ನಡುವೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಸನ ಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಜಿ.ಎಚ್.ತಿಪ್ಪರೆಡ್ಡಿ ಸೇರಿದಂತೆ ಹಲವು ಹಿರಿಯ ಮತ್ತು ಪ್ರಮುಖ ಬಿಜೆಪಿ ನಾಯಕರು ಗೈರುಹಾಜರಾಗಿದ್ದರು.

ಸುಳ್ಯ ಶಾಸಕ ಎಸ್.ಅಂಗಾರ, ರಾಜುಗೌಡ, ಪ್ರಭು ಪಾಟೀಲ್ ಸೇರಿದಂತೆ ಹತ್ತು ಹೆಚ್ಚು ಮಂದಿ ಸಚಿವ ಆಕಾಂಕ್ಷಿ ಶಾಸಕರು ಹಾಗೂ ಮುಖಂಡರು ಬಿಜೆಪಿ ವರಿಷ್ಠರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

'ನಮ್ಮ ಯೋಗ್ಯತೆ ಪಕ್ಷದ ವರಿಷ್ಠರಿಗೆ ಇನ್ನೂ ಮನವರಿಕೆ ಆಗಿರಲಿಕ್ಕೆ ಇಲ್ಲ, ಹೀಗಾಗಿ ನಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಮುಖಂಡರ ವಿರುದ್ಧ ಗುಡುಗಿದ್ದಾರೆ.

ಈ ಮಧ್ಯೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಬಾಲಚಂದ್ರ ಜಾರಕಿಹೊಳಿ, ರಾಜುಗೌಡ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಸ್ಥಾನಕಾಂಕ್ಷಿ ಶಾಸಕರ ಗೈರುಹಾಜರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು.


‘’ನಿನ್ನೆ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಕರೆದು ಮಾತನಾಡಿದ್ದು, ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಿಲ್ಲ ಎಂದಿದ್ದಾರೆ. ನಾನು ಇದರಿಂದ ಪಾಠ ಕಲಿತಿದ್ದೇನೆ’’

-ರಾಜುಗೌಡ ಸುರಪುರ ಶಾಸಕ ಹಾಗೂ ಸಚಿವ ಸ್ಥಾನಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News