ಲಂಚಕ್ಕೆ ಬೇಡಿಕೆ: ಉಗ್ರ ಹಫೀಝ್ ಸಯೀದ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ 3 ಎನ್‍ಐಎ ಅಧಿಕಾರಿಗಳ ವರ್ಗಾವಣೆ

Update: 2019-08-20 17:21 GMT

ಹೊಸದಿಲ್ಲಿ, ಆ. 20: ಮುಂಬೈ ದಾಳಿಯ ರೂವಾರಿ ಹಫೀಝ್ ಸಯೀದ್ ಒಳಗೊಂಡಿರುವ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ದಿಲ್ಲಿ ಮೂಲದ ಉದ್ಯಮಿ ಹೆಸರು ಕೈಬಿಡಲು 2 ಕೋಟಿ ರೂಪಾಯಿ ಲಂಚದ ಬೇಡಿಕೆ ಒಡ್ಡಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಮೂವರು ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬದ ವರಿಷ್ಠ ಹಫೀಝ್ ಸಯೀದ್ ನಡೆಸುತ್ತಿರುವ ಫಲಾಹೆ ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್)ನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧೀಕ್ಷಕ ಸೇರಿದಂತೆ ಮೂವರು ಅಧಿಕಾರಿಗಳು ಪ್ರಕರಣದಿಂದ ಹೆಸರು ಕೈಬಿಡಲು 2 ಕೋಟಿ ರೂಪಾಯಿ ಲಂಚದ ಬೇಡಿಕೆ ಒಡ್ಡಿರುವುದಾಗಿ ಗುರುಗಾಂವ್ ಮೂಲದ ಉದ್ಯಮಿ ಎನ್‌ಐಎಗೆ ದೂರು ಸಲ್ಲಿಸಿದ ಬಳಿಕ ಎನ್‌ಐಎ ಈ ಕ್ರಮ ತೆಗೆದುಕೊಂಡಿದೆ ಎಂದು ಎನ್‌ಐಎ ವಕ್ತಾರ ಮಂಗಳವಾರ ತಿಳಿಸಿದ್ದಾರೆ.

 ‘‘ಮೂವರು ಅಧಿಕಾರಿಗಳ ದುರ್ನಡತೆ ಆರೋಪಿಸಿ ಸಲ್ಲಿಸಲಾದ ದೂರನ್ನು ಎನ್‌ಐಎ ಸ್ವೀಕರಿಸಿದೆ. ಡಿಐಜಿ ಶ್ರೇಣಿಯ ಅಧಿಕಾರಿ ಈ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪಾರದರ್ಶಕ ತನಿಖೆಯ ಖಾತರಿ ನೀಡಲು ಮೂವರು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

 ವರ್ಗಾವಣೆಗೊಂಡ ಮೂವರು ಅಧಿಕಾರಿಗಳಲ್ಲಿ ಒಬ್ಬರು ಪೊಲೀಸ್ ಅಧೀಕ್ಷಕ ರಾಗಿದ್ದು, ಇನ್ನಿಬ್ಬರು ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಬೆರಳಚ್ಚು ತಜ್ಞ. ಇವರು ಫಲಾಹೆ ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್)ನ ಬಗ್ಗೆ ತನಿಖೆ ನಡೆಸುತ್ತಿದ್ದರು.

ಉತ್ತರ ದಿಲ್ಲಿಯಲ್ಲಿರುವ ಉದ್ಯಮಿಯ ನಿವಾಸದಲ್ಲಿ ಇವರು ಶೋಧ ನಡೆಸಿದ್ದರು. ಅನಂತರ ಪ್ರಕರಣದಿಂದ ಕೈಬಿಡಲು ಉದ್ಯಮಿಯಲ್ಲಿ ಲಂಚದ ಬೇಡಿಕೆ ಇರಿಸಿದ್ದರು.

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣು ನೀತಿ ಅನುಸರಿಸಿ ಈ ಅಧಿಕಾರಿಗಳ ವಿರುದ್ಧ ವಿಚಾರಣೆ ಆರಂಭಿಸಿದ್ದೇವೆ. ಇವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಪತ್ತೆಯಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News