2008ರ ಮಾಲೆಗಾಂವ್ ಸ್ಫೋಟ: ಸಾರ್ವಜನಿಕ ವಿಚಾರಣೆಗೆ ಎನ್‌ಐಎ ವಿರೋಧ

Update: 2019-08-20 16:51 GMT

ಹೊಸದಿಲ್ಲಿ, ಆ.20: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಸಾರ್ವಜನಿಕ ವಿಚಾರಣೆ ನಡೆಸಬೇಕು ಎಂಬ ಪತ್ರಕರ್ತರ ಮನವಿಯನ್ನು ವಿರೋಧಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ತಾನು ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುವುದಾದರೂ ಈ ಪ್ರಕರಣದ ಸಾರ್ವಜನಿಕ ತನಿಖೆ ನಡೆಸುವುದನ್ನು ವಿರೋಧಿಸುವುದಾಗಿ ತಿಳಿಸಿದೆ.

ಸಮಾಜದಲ್ಲಿ ಸೌಹಾರ್ದತೆ ಕಾಪಾಡಬೇಕಾದ ಮತ್ತು ಸಾಕ್ಷಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಕೊಠಡಿಯೊಳಗೆ ನಡೆಸಬೇಕು ಎಂದು ಎನ್‌ಐಎ ಜುಲೈಯಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು ಪ್ರಶ್ನಿಸಿ ಪತ್ರಕರ್ತರ ಗುಂಪು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ಉತ್ತರ ನೀಡುವಂತೆ ತನಿಖಾ ತಂಡಕ್ಕೆ ನ್ಯಾಯಾಲಯ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ತನಿಖಾ ಸಂಸ್ಥೆ, “ಈ ಸೂಕ್ಷ್ಮ ಪ್ರಕರಣ ಎಲ್ಲರಿಗೂ, ಮುಖ್ಯವಾಗಿ ಪತ್ರಕರ್ತರಿಗೆ ತಿಳಿದಿರುವಂತದ್ದೇ ಆಗಿದೆ. ಆರೋಪಿಗಳ ವಿರುದ್ಧ ಇರುವ ಆರೋಪವೆಂದರೆ ಅವರು ಮುಸ್ಲಿಂ ಜಿಹಾದಿ ಕಾರ್ಯಕರ್ತರ ವಿರುದ್ಧ ಪ್ರತೀಕಾರ ತೀರಿಸಲು ಮತ್ತು ಎರಡು ಸಮುದಾಯಗಳ ಮಧ್ಯೆ ಬಿರುಕು ಮೂಡಿಸಲು ಯತ್ನಿಸಿದ್ದರು ಎನ್ನುವುದು” ಎಂದು ತಿಳಿಸಿದೆ.

ಸರಕಾರಿ ಅಭಿಯೋಜಕರು ವಾಕ್ ಮತ್ತು ಅಭಿವ್ಯಕ್ರಿ ಸ್ವಾತಂತ್ರ್ಯ ಹಾಗೂ ಮಾಧ್ಯಮ ಸ್ವಾತಂತ್ರ ಹಾಗೂ ಮಾಹಿತಿ ಹಕ್ಕಿನ ಪರವಾಗಿದ್ದಾರೆ. ಆದರೆ ಈ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಇದರ ವಿಚಾರಣೆಯನ್ನು ಪತ್ರಕರ್ತರ ಅನುಪಸ್ಥಿತಿಯಲ್ಲಿ ನಡೆಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News