ರೊಹಿಂಗ್ಯಾ ಜೊತೆ ಬಾಂಗ್ಲಾ, ವಿಶ್ವಸಂಸ್ಥೆ ಸಮಾಲೋಚನೆ

Update: 2019-08-20 17:06 GMT

ಢಾಕಾ, ಆ. 20: ಯಾರಾದರೂ ಮ್ಯಾನ್ಮಾರ್‌ಗೆ ಮರಳಲು ಬಯಸುತ್ತಾರೆಯೇ ಎನ್ನುವುದನ್ನು ನಿರ್ಧರಿಸಲು 3,000ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯವನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮತ್ತು ಬಾಂಗ್ಲಾದೇಶದ ಅಧಿಕಾರಿಗಳು ಮಂಗಳವಾರ ಆರಂಭಿಸಿದ್ದಾರೆ.

2017ರ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ 7,30,000ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ‘ಜನಾಂಗೀಯ ಹತ್ಯೆ’ಯ ಉದ್ದೇಶದಿಂದ ಮ್ಯಾನ್ಮಾರ್ ಸೇನೆ ಈ ದಮನ ಕಾರ್ಯಾಚರಣೆ ನಡೆಸಿದೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ.

ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ಹೆಚ್ಚಿನ ನಿರಾಶ್ರಿತರು ಮ್ಯಾನ್ಮಾರ್‌ಗೆ ವಾಪಸಾಗಲು ನಿರಾಕರಿಸಿದ್ದಾರೆ. ಅಲ್ಲಿಗೆ ವಾಪಸಾದರೆ ನಮ್ಮ ಮೇಲೆ ಇನ್ನೂ ಹೆಚ್ಚಿನ ಹಿಂಸಾಚಾರ ನಡೆಯುತ್ತದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ ನೀಡಿದ 22,000ಕ್ಕೂ ಅಧಿಕ ಮಂದಿಯ ಪಟ್ಟಿಯಿಂದ 3,450 ಮಂದಿಯ ವಾಪಸಾತಿಗೆ ಮ್ಯಾನ್ಮಾರ್ ಅನುಮತಿ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಮ್ಯಾನ್ಮಾರ್‌ಗೆ ವಾಪಸಾಗುವ ಆಯ್ಕೆಯ ಬಗ್ಗೆ ಚರ್ಚಿಸಲು ಮುಂದೆ ಬರುವಂತೆ ನಿರಾಶ್ರಿತರನ್ನು ಬಾಂಗ್ಲಾದೇಶ ಸರಕಾರ ಮತ್ತು ಯುಎನ್‌ಎಚ್‌ ಸಿಆರ್ ಜೊತೆಯಾಗಿ ಕರೆಯಲಿದೆ’’ ಎಂದು ಬಾಂಗ್ಲಾದೇಶದ ಕಾಕ್ಸ್ ಬಝಾರ್ ಜಿಲ್ಲೆಯಲ್ಲಿರುವ ಯುಎನ್‌ಎಚ್‌ಸಿಆರ್ ವಕ್ತಾರೆ ಲೂಯಿಸ್ ಡೊನೊವನ್ ‘ರಾಯ್ಟರ್ಸ್’ಗೆ ತಿಳಿಸಿದರು.

ವಾಪಸಾಗುವ ಇಚ್ಛೆಯನ್ನು ವ್ಯಕ್ತಪಡಿಸುವರನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಇನ್ನೊಮ್ಮೆ ಗೌಪ್ಯವಾಗಿ ಪ್ರಶ್ನಿಸಲಿದೆ ಹಾಗೂ ಅವರು ಸ್ವಯಂಪ್ರೇರಿತ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News