ಭಾರತದ ವಿರುದ್ಧದ ನಾಟಕೀಯ ಮಾತುಗಳನ್ನು ಕಡಿಮೆ ಮಾಡಿ

Update: 2019-08-20 17:14 GMT

ವಾಶಿಂಗ್ಟನ್, ಆ. 20: ಉದ್ವಿಗ್ನತೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿ ಭಾರತದ ವಿರುದ್ಧ ಆಡುತ್ತಿರುವ ನಾಟಕೀಯ ಮಾತುಗಳನ್ನು ಕಡಿಮೆ ಮಾಡುವಂತೆ ಟೆಲಿಫೋನ್ ಸಂಭಾಷಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಒತ್ತಾಯಿಸಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್‌ನಲ್ಲಿ 30 ನಿಮಿಷ ಮಾತುಕತೆ ನಡೆಸಿದ ಸ್ವಲ್ಪವೇ ಹೊತ್ತಿನ ಬಳಿಕ, ಟ್ರಂಪ್ ಇಮ್ರಾನ್ ಖಾನ್‌ಗೆ ಫೋನ್ ಮಾಡಿದರು.

ಫೋನ್ ಸಂಭಾಷಣೆಯ ವೇಳೆ, ಪಾಕಿಸ್ತಾನಿ ನಾಯಕರ ಭಾರೀ ಪ್ರಮಾಣದ ನಾಟಕೀಯ ಮಾತುಗಳು ಮತ್ತು ಭಾರತ ವಿರೋಧಿ ಹಿಂಸೆಗೆ ಅವರು ನೀಡುತ್ತಿರುವ ಕುಮ್ಮಕ್ಕನ್ನು ಮೋದಿ, ಟ್ರಂಪ್ ಗಮನಕ್ಕೆ ತಂದರು.

ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನಿ ನಾಯಕರು ಆಡುತ್ತಿರುವ ತೀವ್ರ ನಾಟಕೀಯ ಮಾತುಗಳ ತೀವ್ರತೆಯನ್ನು ಕಡಿಮೆ ಮಾಡುವ ಅಗತ್ಯದ ಬಗ್ಗೆ ಪಾಕ್ ಪ್ರಧಾನಿ ಜೊತೆ ಚರ್ಚಿಸಲು ಟ್ರಂಪ್ ಅವರಿಗೆ ಫೋನ್ ಮಾಡಿದರು ಎಂದು ಶ್ವೇತಭವನವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಗತ್ಯದ ಬಗ್ಗೆ ಟ್ರಂಪ್ ಇಮ್ರಾನ್ ಜೊತೆ ಮಾತನಾಡಿದರು ಹಾಗೂ ಸಂಯಮ ಪ್ರದರ್ಶಿಸುವಂತೆ ಉಭಯ ಬಣಗಳನ್ನೂ ಒತ್ತಾಯಿಸಿದರು ಎಂದು ಶ್ವೇತಭವನ ಹೇಳಿದೆ.

ಅಮೆರಿಕ-ಪಾಕಿಸ್ತಾನ ಆರ್ಥಿಕ ಮತ್ತು ವ್ಯಾಪಾರ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲೂ ಟ್ರಂಪ್ ಮತ್ತು ಇಮ್ರಾನ್ ಒಪ್ಪಿದರು ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಪರಿಸ್ಥಿತಿ ಕಠಿಣವಿದೆ ಎಂದ ಟ್ರಂಪ್

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ವಲಯದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಶ್ರಮಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರನ್ನು ಒತ್ತಾಯಿಸಿದ್ದಾರೆ. ವಲಯದಲ್ಲಿ ಈಗ ನೆಲೆಸಿರುವ ಪರಿಸ್ಥಿತಿ ಕಠಿಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

‘‘ನನ್ನ ಇಬ್ಬರು ಉತ್ತಮ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ವ್ಯಾಪಾರ, ಸೇನಾ ಭಾಗೀದಾರಿಕೆ ಮತ್ತು ಅತ್ಯಂತ ಮುಖ್ಯವಾಗಿ ಕಾಶ್ಮೀರದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತ
ಮತ್ತು ಪಾಕಿಸ್ತಾನಗಳು ಜೊತೆಯಾಗಿ ಕೆಲಸ ಮಾಡುವ ಅಗತ್ಯದ ಬಗ್ಗೆ ಮಾತನಾಡಿದೆ’’ ಎಂದು ಫೋನ್‌ನಲ್ಲಿ ಉಭಯ ನಾಯಕರ ಜೊತೆ ಮಾತನಾಡಿದ ಬಳಿಕ ಮಾಡಿದ ಟ್ವೀಟ್‌ನಲ್ಲಿ ಟ್ರಂಪ್ ಹೇಳಿದರು.

‘‘ಪರಿಸ್ಥಿತಿ ಕಠಿಣವಾಗಿದೆ, ಆದರೆ ಸಂಭಾಷಣೆ ಉತ್ತಮವಾಗಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News