‘ವಾಕ್ ಔಟ್ ಪಾಲಿಟಿಕ್ಸ್’ನ ಹಿಂದಿನ ಕರಾಳ ಮುಖ

Update: 2019-08-20 17:44 GMT

ಮಾನ್ಯರೇ,

ಮೋದಿ ಸರಕಾರದ ಎರಡನೆಯ ಅವಧಿಯ ಪ್ರಥಮ ಅಧಿವೇಶನವು ತರಾತುರಿಯಲ್ಲಿ ಮಾಹಿತಿ ಹಕ್ಕು ತಿದ್ದುಪಡಿ ಕಾಯ್ದೆ, ಯುಎಪಿಎ ತಿದ್ದುಪಡಿ ಕಾಯ್ದೆ, ತ್ರಿವಳಿ ತಲಾಖ್ ಕಾಯ್ದೆ, ಮಾನವ ಹಕ್ಕು ತಿದ್ದುಪಡಿ ಕಾಯ್ದೆ, ಎನ್‌ಐಎ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಕಾಶ್ಮೀರ್ ರೀಆರ್ಗನೈಸೇಷನ್ ಆ್ಯಕ್ಟ್ ಗಳಂತಹ ಬಹಳಷ್ಟು ವಿವಾದಾತ್ಮಕ ಅಧಿನಿಯಮಗಳನ್ನು ಸಮಗ್ರವಾಗಿ ಚರ್ಚಿಸದೆ ಕಾನೂನಾಗಿ ಪರಿವರ್ತಿಸಿದೆ ಎನ್ನುವ ವಿಚಾರವು ಹಲವು ದಿನಗಳಿಂದ ಸಮಾಜದಲ್ಲಿ ನಿರಂತರ ಚರ್ಚಿಸಲ್ಪಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಕಡೆ ಈ ಅಧಿವೇಶನದಲ್ಲಿ ಯಾವ ಯಾವ ಅಧಿನಿಯಮಗಳು ಪಾಸ್ ಆಗಿದೆ ಎನ್ನುವ ವಿಚಾರವು ಬಹುಶಃ ಹಲವಾರು ಸಂಸದರಿಗೆ ನೆನಪಿದೆಯೇ? ಎಂದು ಕೇಳಿದರೆ, ಎಷ್ಟು ಸಂಸದರು ಸರಿಯಾಗಿ ಉತ್ತರಿಸಬಹುದು? ಇನ್ನು ಏಕೆ ಈ ವಿಧೇಯಕವನ್ನು ನೀವು ಸಮರ್ಥಿಸಿದ್ದೀರಿ? ಎಂದು ಕೇಳಿದರೆ, ಆ ವಿಧೇಯಕವು ಕಾನೂನಾಗಿ ಪರಿವರ್ತನೆಗೊಂಡರೆ ಸಮಾಜದ ಮೇಲೆ ಯಾವ ರೀತಿ ಪ್ರಭಾವಗೊಳ್ಳಬಹುದು ಎಂದು ಎಷ್ಟು ಸಂಸದರು ಸಮರ್ಥವಾಗಿ ತಮ್ಮ ವಿಚಾರವನ್ನು ಮುಂದಿಡಬಹುದು?

ಚರ್ಚೆಯ ಮಧ್ಯೆ ಸಂಸತ್‌ನಿಂದ ಬಹಳಷ್ಟು ಪಕ್ಷಗಳು ವಾಕ್‌ಔಟ್ ಮಾಡಿವೆ. ‘ವಾಕ್ ಔಟ್’ ಮಾಡಿರುವ ಪಕ್ಷಗಳ ಉದ್ದೇಶವಾದರೂ ಏನು? ಚರ್ಚೆಯ ಮಧ್ಯೆ, ಚರ್ಚೆಯಲ್ಲಿ ಭಾಗವಹಿಸದೇ ಚರ್ಚೆಯಿಂದ ದೂರ ಉಳಿದು ಅವರು ಸಾಧಿಸಿದ್ದಾದರೂ ಏನನ್ನು? ‘‘ವಾಕ್‌ಔಟ್ ಪಾಲಿಟಿಕ್ಸ್’’ ಎಂದರೇನೆಂಬುದನ್ನು ಅರ್ಥಮಾಡುವ ಅವಶ್ಯಕತೆ ಇದೆ. ಉದಾ: ಭಾರತೀಯ ಸಂವಿಧಾನದ ಆರ್ಟಿಕಲ್ 370 ಮತ್ತು 35ಎ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಾಗ ವಾಕ್‌ಔಟ್ ಮಾಡಿರುವ ಬಿಜೆಪಿಯ ಮಿತ್ರ ಪಕ್ಷವಾಗಿರುವ ಜೆಡಿಯುನವರು ‘ನಾವು ಸೋಷಿಯಲಿಸ್ಟ್’ಗಳು, ನಮ್ಮ ಪಕ್ಷದ ಸ್ಥಾಪಕರಾದ ಜಯಪ್ರಕಾಶ್ ನಾರಾಯಣ್ ಮತ್ತು ಇತರರು ಭಾರತೀಯ ಸಂವಿಧಾನದ ಆರ್ಟಿಕಲ್ 370 ಮತ್ತು 35ಎ ತೆಗೆದುಹಾಕಬಾರದೆಂದು ಹೇಳುತ್ತಿದ್ದರು, ಆದ್ದರಿಂದಾಗಿ ನಾವು ಈ ತಿದ್ದುಪಡಿಯನ್ನು ಸಮರ್ಥಿಸುವುದಿಲ್ಲ, ಬದಲಾಗಿ ನಾವು ವಾಕ್ ಔಟ್ ಮಾಡಿದೆವು ಎಂದು ಹೇಳಿದರು. ಪಾರ್ಲಿಮೆಂಟಿನಲ್ಲಿ ಸದರಿ ತಿದ್ದುಪಡಿಯ ಬಗ್ಗೆ ವೋಟು ನಡೆದಾಗ, ಸಂಸದರ ಅಧಿಕ ಮತಗಳು ತಿದ್ದುಪಡಿಯ ಪರವಾಗಿತ್ತು, ಅಂದರೆ ವಿರೋಧಿಗಳು ವೋಟು ಹಾಕಿಲ್ಲವೆಂದಾಯಿತಲ್ಲವೇ? ವಿರೋಧವಾಗಿ ವೋಟು ಹಾಕುವ ಸಂದರ್ಭ ಎದುರಾದಾಗ ವಿನಾಕಾರಣ ವಾಕ್ ಔಟ್ ಮಾಡಿರುವು ದರಿಂದ, ತಿದ್ದುಪಡಿಯ ಪರವಿರುವ ಮತಗಳ ಸಂಖ್ಯೆ ಹೆಚ್ಚಾಗಿ, ಆ ಮಸೂದೆಯು ಅಂಗೀಕಾರಗೊಂಡಿತಲ್ಲವೇ? ಅಂದರೆ ವಾಕ್ ಔಟ್ ಮಾಡಿರುವ ಈ ಬಿಜೆಪಿಯ ಮಿತ್ರ ಪಕ್ಷ ಪರೋಕ್ಷವಾಗಿ ಬಿಜೆಪಿಯನ್ನು ಸಮರ್ಥಿಸಿದಂತಾಯಿತಲ್ಲವೇ?

ಇನ್ನು ತ್ರಿವಳಿ ತಲಾಖ್ ಮಸೂದೆ ಬಗ್ಗೆ ಮಾತನಾಡುವುದಾದರೆ, ರಾಜ್ಯಸಭೆಯಿಂದ ಅನುಮೋದನೆಗೊಂಡಾಗ ಅಲ್ಲಿ ಈ ಮಸೂದೆಯ ಪರವಾಗಿ 99 ಮತ್ತು ವಿರೋಧವಾಗಿ 84 ಮತಗಳು ಬಿದ್ದವು, ಅಂದರೆ ಮಸೂದೆಯ ಪರವಾಗಿದ್ದ ಬಿಜೆಪಿಯ ಪೂರ್ಣ ಸಂಖ್ಯಾ ಬಲವು 78 ಮತ್ತು ಅದರ ಮಿತ್ರ ಪಕ್ಷಗಳ ವೋಟು ಸೇರಿ 99 ಮತಗಳು. ಅದೇ ರೀತಿ ಕಾಂಗ್ರೆಸ್‌ನ ಸಂಖ್ಯಾ ಬಲ 46 ಇತರ ವಿರೋಧ ಪಕ್ಷಗಳ ಮತವೂ ಸೇರಿ ಸುಮಾರು 84. ಇನ್ನು ಈ ಮಸೂದೆಯನ್ನು ವಿರೋಧಿಸಿ ವಾಕ್ ಔಟ್ ಮಾಡಿರುವ ಪಕ್ಷಗಳಾದ ಟಿಆರ್‌ಎಸ್, ಎಐಎಡಿಎಂಕೆ, ಜೆಡಿಯುಗಳ ಸಂಖ್ಯಾ ಬಲ 6 +11 +6 = 23. ಅಂದರೆ 84+23=107 ಮಸೂದೆಯ ವಿರುದ್ಧವಾಗಿರಬೇಕಿತ್ತು. ಆದರೆ ಕೇವಲ 84 ಮತಗಳು ಮಾತ್ರ ಮಸೂದೆಯ ವಿರುದ್ಧವಾಗಿತ್ತು ಎಂದರೆ, ಮತ ಹಾಕದೆ ‘ವಾಕ್ ಔಟ್’ ಮಾಡಿರುವ ಪಕ್ಷಗಳು ನಿಜವಾಗಿ ಬಿಜೆಪಿ ತಂದಿರುವ ಮಸೂದೆಯ ಪರವಾಗಿತ್ತು. ಆದರೆ ಈ ಪಕ್ಷಗಳಿಗೆ ತನ್ನ ಮುಸ್ಲಿಂ ವೋಟ್ ಬ್ಯಾಂಕ್ ಬಗ್ಗೆ ಚಿಂತೆ ಇದ್ದುದರಿಂದ, ಈ ಪಕ್ಷಗಳು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ವಾಕ್ ಔಟ್ ಮಾಡಿವೆೆ. ಈ ರೀತಿ ವಾಕ್ ಔಟ್ ಮಾಡುವುದರಿಂದಾಗಿ ತನ್ನ ಮುಸ್ಲಿಂ ಸಮರ್ಥಕರಿಗೆ ತಾವು ಇನ್ನೂ ‘ಸೋಷಿಯಲಿಸ್ಟ್’ಗಳಾಗಿಯೇ ಉಳಿದಿದ್ದೇವೆ, ಬಿಜೆಪಿ ತರಲು ಹೊರಟಿರುವ ತ್ರಿವಳಿ ತಲಾಖ್ ಮಸೂದೆಯನ್ನು ನಾವು ವಿರೋಧಿಸುತ್ತೇವೆ ಎಂದು ಬಿಂಬಿಸಲು ಹೊರಟಿದ್ದಾರೆ. ಈ ದ್ವಿಮುಖ ಧೋರಣೆಯು ನಿಜಕ್ಕೂ ನಮ್ಮ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - -ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Editor - -ತಲ್ಹ ಇಸ್ಮಾಯಿಲ್ ಬೆಂಗ್ರೆ

contributor

Similar News