ಬೌದ್ಧ ಧರ್ಮದೊಳಗೆ ಹರಡುತ್ತಿರುವ ಉಗ್ರವಾದ

Update: 2019-08-20 17:58 GMT

ಶ್ರೀಲಂಕಾದಲ್ಲಿ ಬೌದ್ಧ ಸನ್ಯಾಸಿಗಳಿಗೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿದೆ. ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಸ್ವಚ್ಛಗೊಳಿಸುವಿಕೆಯ ಮಾತು ಕೇಳಿ ಬಂದಿದೆ. ಶಾಂತಿ, ಸಹನೆ, ಸಹಬಾಳ್ವೆಗೆ ಹೆಸರಾದ ಬೌದ್ಧ ಧರ್ಮ ರಾಷ್ಟ್ರೀಯತೆಯ ಒಂದು ಹೊಸ ಯುಗದಲ್ಲಿ ಹಿಂಸೆಯ ಹಾದಿಹಿಡಿಯುತ್ತಿದೆ.


ಬೌದ್ಧ ಸನ್ಯಾಸಿ ತನ್ನ ಬೌದ್ಧ ವಿಹಾರದಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡು ಒಂದು ಧರ್ಮದ ಕೆಡುಕುಗಳ, ಅನಿಷ್ಟಗಳ ಬಗ್ಗೆ ಸಿಟ್ಟಾಗಿ ದೂರುತ್ತಿದ್ದಾಗ, ಕಿವಿಗಳಿಗೆ ಕೇಳಿಸುವಷ್ಟು ಸಮೀಪದಲ್ಲಿ ಒಂದು ಪೆಟ್ರೋಲ್ ಬಾಂಬ್ ಸ್ಫೋಟಗೊಂಡಿತು.

ಆದರೆ ಆ ಬೌದ್ಧ ಸನ್ಯಾಸಿ ಅಂಬಲಂಗೊಡ ಸುಮೇಧಾನಂದ ಥೆರೋ, ಬಾಂಬ್ ಸ್ಫೋಟದ ಸದ್ದು ಕೇಳಿಸದವನಂತೆ ಕುಳಿತೇ ಇದ್ದ. ದಕ್ಷಿಣ ಶ್ರೀಲಂಕಾದ ಜಿಂಜೊಟ ಪಟ್ಟಣದ ರಾತ್ರಿಯ ಗಾಳಿಯಲ್ಲಿ ಗುಂಯ್‌ಗುಡುತ್ತಿದ್ದ ಸೊಳ್ಳೆಗಳನ್ನು ತನ್ನ ಕೈಯಿಂದ ಓಡಿಸುತ್ತಾ ಆತ ತನ್ನ ಕೋಪದ ಭಾಷಣವನ್ನು ಮುಂದುವರಿಸಿದ: ಮುಸ್ಲಿಮರು ಹಿಂಸಾ ನಿರತರು, ಮುಸ್ಲಿಮರು ಆಸೆಬುರುಕರು.: ‘‘ನಮ್ಮ ಎಲ್ಲ ಭೂಮಿಯನ್ನು ಹಾಗೂ ಯಾವುದು ನಮಗೆ ಮೌಲ್ಯಯುತವಾದದ್ದೋ ಅದೆಲ್ಲವನ್ನೂ ಕಿತ್ತುಕೊಳ್ಳುವುದು, ವಶಪಡಿಸಿಕೊಳ್ಳುವುದು ಮುಸ್ಲಿಮರ ಗುರಿ.’’ ಆತ ಹೇಳಿದ: ‘‘ಒಂದೊಮ್ಮೆ ಬೌದ್ಧ ಭೂಮಿಯಲ್ಲಿ ಏನೆಲ್ಲ ಸೇರಿತ್ತು ಯೋಚಿಸಿ: ಅಫ್ಘಾನಿಸ್ತಾನ, ಪಾಕಿಸ್ತಾನ, ಕಾಶ್ಮೀರ ಇಂಡೋನೇಶ್ಯಾ ಅವುಗಳೆಲ್ಲ ಇಸ್ಲಾಮಿಂದಾಗಿ ನಾಶವಾಗಿವೆ.’’

ಕೆಲವೇ ನಿಮಿಷಗಳ ಬಳಿಕ, ಬೌದ್ಧ ವಿಹಾರದ ಓರ್ವ ಸಹಾಯಕ ಓಡುತ್ತಾ ಬಂದು ಸಮೀಪದ ಮಸೀದಿಯೊಂದರ ಮೇಲೆ ಯಾರೋ ಒಂದು ಬಾಂಬ್ ಎಸೆದಿದ್ದಾರೆಂದು ಹೇಳಿದ. ಆ ಬೌದ್ಧ ಸನ್ಯಾಸಿ ತನ್ನ ಭುಜಗಳನ್ನು ಕುಣಿಸುತ್ತಾ ನಿರಾಸಕ್ತಿ ತೋರಿದ. ಆತ ಅವನ ಧರ್ಮೀಯರಿಗೆ, ಶ್ರೀಲಂಕಾದಲ್ಲಿ ಬಹುಸಂಖ್ಯಾತರಾಗಿರುವ ಬೌದ್ಧ ಧರ್ಮೀಯರಿಗೆ ಮಾತ್ರ ಜವಾಬ್ದಾರ. ಶ್ರೀಲಂಕಾದ ಜನಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ ಇರುವ ಮುಸ್ಲಿಮರಿಗೆ ಏನೇ ಆದರೂ ಅವನಿಗೆ ಸಂಬಂಧಿಸಿದ್ದಲ್ಲ.

ಸುಮೇಧಾನಂದ ಥೆರೋನಂತಹ ಪ್ರಭಾವಶಾಲಿ ಬೌದ್ಧ ಸನ್ಯಾಸಿಗಳ ರಾಜಕೀಯವಾಗಿ ಬಲಿಷ್ಠರಾದ ಒಂದು ಜಾಲದಿಂದ ಕುಮ್ಮಕ್ಕು ಪಡೆದ ಬೌದ್ಧರು ಶ್ರೀಲಂಕಾದಲ್ಲಿ ಉಗ್ರಗಾಮಿ ಬುಡಕಟ್ಟುವಾದದ (ಟ್ರೈಬಲಿಸಂ) ಒಂದು ಯುಗವನ್ನು ಪ್ರವೇಶಿಸಿದ್ದಾರೆ. ತಮ್ಮನ್ನು ಆಧ್ಯಾತ್ಮಿಕ ಯೋಧರೆಂದು ಹೇಳಿಕೊಳ್ಳುವ ಇವರು ಬಾಹ್ಯ ಶಕ್ತಿಯೊಂದರ ವಿರುದ್ಧ ತಮ್ಮ ಧರ್ಮವನ್ನು ರಕ್ಷಿಸಲೇ ಬೇಕಾಗಿದೆ ಎಂದು ಭಾವಿಸುತ್ತಾರೆ.

ಅವರ ಈ ಭಾವನೆ ಸಕಾರಣ ಅನ್ನಿಸದಿರಬಹುದು. ಯಾಕೆಂದರೆ ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಲ್ಲಿ ಬೌದ್ಧರು ದೇಶದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಬಹು ಸಂಖ್ಯಾತರಿದ್ದಾರೆ. ಈ ಎರಡೂ ದೇಶಗಳು ತೀವ್ರಗಾಮಿಯಾದ ಧಾರ್ಮಿಕ-ರಾಷ್ಟ್ರೀಯವಾದಿ ಚಳವಳಿಯ ಮುಂಚೂಣಿಯಲ್ಲಿವೆ. ಆದರೂ ಕೂಡ ಕೆಲವು ಬೌದ್ಧರು, ವಿಶೇಷವಾಗಿ ಥೆರವಾಡಾ ಪಂಥದ ಅನುಯಾಯಿಗಳು, ತಮ್ಮ ಅಸ್ತಿತ್ವಕ್ಕೇ ಬೆದರಿಕೆ ಉಂಟಾಗಿದೆ ಎಂದು ದೃಢವಾಗಿ ನಂಬಿದ್ದಾರೆ, ನಂಬಿಸುತ್ತಿದ್ದಾರೆ. ನಿರ್ದಿಷ್ಟವಾಗಿ ಈ ಬೆದರಿಕೆ ಇಸ್ಲಾಂ ಧರ್ಮದಿಂದ ಬರುತ್ತಿದೆ ಎಂದು ಅವರು ಭಾವಿಸಿದ್ದಾರೆ.

ಬೌದ್ಧರಲ್ಲಿ ಒಂದು ವರ್ಗದವರು ತಮ್ಮ ಧರ್ಮದ ಶಾಂತಿ ತತ್ವಗಳಿಗೆ ವಿದಾಯ ಹೇಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಬೌದ್ಧರು ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಮಾರಕವಾದ ದಾಳಿಗಳನ್ನು ನಡೆಸಿದ್ದಾರೆ. ಬೌದ್ಧ ರಾಷ್ಟ್ರೀಯವಾದಿ ಸಿದ್ಧಾಂತಿಗಳು ತೀವ್ರಗಾಮಿ ಬೌದ್ಧ ಭಿಕ್ಷುಗಳ ಆಧ್ಯಾತ್ಮಿಕ ಅಧಿಕಾರವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

‘‘ಬೌದ್ಧರು ಈ ಹಿಂದೆ ಎಂದೂ ನಮ್ಮನ್ನು ಇಷ್ಟೊಂದು ದ್ವೇಷಿಸುತ್ತಿರಲಿಲ್ಲ’’ ಎನ್ನುತ್ತಾರೆ, 2017ರಲ್ಲಿ ಬೌದ್ಧರ ಗುಂಪುಗಳಿಂದ ದಾಳಿಗೊಳಗಾದ ಶ್ರೀಲಂಕಾದ ಜಿಂಜೊಟದಲ್ಲಿರುವ ಹಿಲ್ಲ್ಲುರ್ ಮಸೀದಿಯ ಇಮಾಮ್ ಮುಹಮ್ಮದ್ ನಾಸಿರ್. ‘‘ನಾವು ಈ ದೇಶಕ್ಕೆ ಸೇರಿದವರಲ್ಲ; ನಾವು ದೇಶ ಬಿಟ್ಟು ಹೋಗಬೇಕೆಂಬ ಸಂದೇಶವನ್ನು ಅವರ ಸನ್ಯಾಸಿಗಳು ಹರಡುತ್ತಿದ್ದಾರೆ. ಆದರೆ ನಾವು ಹೋಗುವುದಾದರೂ ಎಲ್ಲಿಗೆ? ಇದು ನಮ್ಮ ಮನೆ.’’

ಕಳೆದ ತಿಂಗಳು ಶ್ರೀಲಂಕಾದಲ್ಲಿ ಓರ್ವ ಪ್ರಭಾವಶಾಲಿ ಬೌದ್ಧ ಸನ್ಯಾಸಿ ಉಪವಾಸ ಮುಷ್ಕರ ನಡೆಸಿದ ಪರಿಣಾಮವಾಗಿ ಅಲ್ಲಿಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎಲ್ಲ ಒಂಬತ್ತು ಮಂದಿ ಮುಸ್ಲಿಮ್ ಸಚಿವರು ರಾಜೀನಾಮೆ ನೀಡಬೇಕಾಯಿತು. ಈಸ್ಟರ್ ರವಿವಾರದಂದು ಶ್ರೀಲಂಕಾದಲ್ಲಿ ನಡೆದಿದ್ದ ಬಾಂಬ್ ದಾಳಿಗಳಿಗೆ ಮುಸ್ಲಿಂ ರಾಜಕಾರಣಿಗಳ ಬೆಂಬಲವಿತ್ತು; ಅವರು ಕೂಡ ಅದರಲ್ಲಿ ಭಾಗಿಯಾಗಿದ್ದಾರೆಂದು ಆ ಸನ್ಯಾಸಿ ಸೂಚ್ಯವಾಗಿ ಹೇಳಿದ್ದ. ಆ ದಾಳಿಗಳಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಮ್ಯಾನ್ಮಾರ್‌ನಲ್ಲಿ ದೇಶದ ಹೆಚ್ಚಿನ ಮುಸ್ಲಿಮರು ಜನಾಂಗೀಯ ಶುಚಿಗೊಳಿಸುವಿಕೆ (ಎತ್ನಿಕ್ ಕ್ಲೆನ್ಸಿಂಗ್) ಚಳವಳಿಯ ಪರಿಣಾಮವಾಗಿ ದೇಶ ತೊರೆದು ಹೋಗಿದ್ದಾರೆ. ಆದರೂ ಅಲ್ಲಿ ಬೌದ್ಧ ಸನ್ಯಾಸಿಗಳು ಇನ್ನೂ ಕೂಡ ತಮ್ಮ ದೇಶದ ಮೇಲೆ ಒಂದು ಇಸ್ಲಾಮಿಕ್ ದಾಳಿ ನಡೆಯಬಹುದೆಂದು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲಿ ದೇಶದ ಜನಸಂಖ್ಯೆಯ ಶೇ. 5ಕ್ಕಿಂತಲೂ ಕಡಿಮೆ ಮುಸ್ಲಿಮರು ಇದ್ದಾರಾದರೂ ಅವರು ಇಂತಹ ಎಚ್ಚರಿಕೆ ನೀಡುತ್ತಾರೆಂಬುದು ಗಮನಾರ್ಹ. ಕಳೆದ ಮೇ ತಿಂಗಳಲ್ಲಿ ರಮಝಾನ್ ಸಮಾರಂಭದ ವೇಳೆ ಬೌದ್ಧರ ಗುಂಪುಗಳು ಮಸೀದಿಗಳಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಗಳ ಮೇಲೆ ಮುತ್ತಿಗೆ ಹಾಕಿದಾಗ ಪ್ರಾರ್ಥನೆ ನಿರತ ಮುಸ್ಲಿಮರು ಅಲ್ಲಿಂದ ಪಲಾಯನ ಮಾಡಬೇಕಾಯಿತು.

ಬೌದ್ಧ ಧರ್ಮದ ಶಾಂತಿಯುತ ಮುಖದಿಂದಾಗಿ ಬೌದ್ಧ ಧರ್ಮವನ್ನು ಸಾಮಾನ್ಯವಾಗಿ ಯಾರೂ ಕೂಡ ಪಂಥೀಯ ದಾಳಿಯೊಂದಿಗೆ ಸಮೀಕರಿಸುವುದಿಲ್ಲ. ಆದರೆ ಶಾಂತಿ ಎಂಬುದು ಯಾವುದೇ ಒಂದು ಧರ್ಮದ ಸರ್ವ ಸ್ವಾಮ್ಯವಲ್ಲ. ಆದ್ದರಿಂದ ಬೌದ್ಧರು ಕೂಡ ಯುದ್ಧ ಮಾಡುತ್ತಾರೆ.

‘‘ಬೌದ್ಧ ಸನ್ಯಾಸಿಗಳು ತಾವು ಯಾವತ್ತೂ ಹಿಂಸೆಯನ್ನು ಸಮರ್ಥಿಸುವುದಿಲ್ಲ, ಸಹಿಸುವುದಿಲ್ಲ, ಕ್ಷಮಿಸುವುದಿಲ್ಲ ಎನ್ನುತ್ತಾರೆ. ಆದರೆ ಅದೇ ವೇಳೆ ಬೌದ್ಧ ಧರ್ಮವನ್ನು ಅಥವಾ ಬೌದ್ಧ ರಾಷ್ಟ್ರಗಳನ್ನು ಯಾವ ಮಾರ್ಗದ ಮೂಲಕವಾದರೂ ರಕ್ಷಿಸಲೇ ಬೇಕು ಎಂದು ಕೂಡ ಅವರು ಹೇಳುತ್ತಾರೆ.’’ ಎಂದಿದ್ದಾರೆ ಬೌದ್ಧ ಧರ್ಮ ಮತ್ತು ರಾಷ್ಟ್ರೀಯತೆಯ ಕೂಡಿಕೆಯನ್ನು ಅಧ್ಯಯನ ಮಾಡಿರುವ ಡೆನ್ಮಾರ್ಕ್‌ನ ಆರ್ಡನ್ ವಿಶ್ವವಿದ್ಯಾನಿಲಯದ ಮಾನವ ಶಾಸ್ತ್ರಜ್ಞ ಮೈಕೆಲ್ ಗ್ರೇವರ್ಸ್.

ಶ್ರೀಲಂಕಾದಲ್ಲಿ ಬೌದ್ಧ ಸನ್ಯಾಸಿಗಳಿಗೆ ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿದೆ. ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಸ್ವಚ್ಛಗೊಳಿಸುವಿಕೆಯ ಮಾತು ಕೇಳಿ ಬಂದಿದೆ. ಶಾಂತಿ, ಸಹನೆ, ಸಹಬಾಳ್ವೆಗೆ ಹೆಸರಾದ ಬೌದ್ಧ ಧರ್ಮ ರಾಷ್ಟ್ರೀಯತೆಯ ಒಂದು ಹೊಸ ಯುಗದಲ್ಲಿ ಹಿಂಸೆಯ ಹಾದಿಹಿಡಿಯುತ್ತಿದೆ. ಮ್ಯಾನ್ಮಾರ್‌ನ ಅತ್ಯಂತ ದೊಡ್ಡ ನಗರವಾಗಿರುವ ಯಾಂಗೋನ್‌ನಲ್ಲಿ ಮೇ ತಿಂಗಳಲ್ಲಿ ಸಹಸ್ರಾರು ಜನರು ನೆರೆದಿದ್ದರು. ದ್ವೇಷ ಹರಡುವ ಭಾಷಣ ಮಾಡಿದ್ದಕ್ಕಾಗಿ ಒಂದೊಮ್ಮೆ ಸೆರೆಮನೆ ಶಿಕ್ಷೆಗೆ ಗುರಿಯಾಗಿದ್ದ ಓರ್ವ ಬೌದ್ಧ ಸನ್ಯಾಸಿ ಆಶಿನ್ ವಿರಾತುವಿನ ಭಾಷಣ ಕೇಳಲು ಆ ಬೃಹತ್ ಜನಸ್ತೋಮ ಅಲ್ಲಿ ನೆರೆದಿತ್ತು. ವಿರಾತ್ ಅಂದು ತನ್ನ ಭಾಷಣದಲ್ಲಿ ಮ್ಯಾನ್ಮಾರ್ ಸೇನೆಯನ್ನು ಹಾಡಿ ಹೊಗಳಿದ.

2017ರ ಆಗಸ್ಟ್ ತಿಂಗಳ ಲಾಗಾಯಿತು 7,00,000ಕ್ಕಿಂತಲೂ ಹೆಚ್ಚು ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ತೊರೆದು ಹೋಗಿದ್ದಾರೆ. ಅವರು ಪಲಾಯನ ಮಾಡಿ ಬಾಂಗ್ಲಾದೇಶಕ್ಕೆ ಹೋಗಲು ಕಾರಣ: ಮ್ಯಾನ್ಮಾರ್‌ನ ಸೇನೆ ಮತ್ತು ಅದರ ಮಿತ್ರ ಸಂಘಟನೆಗಳು ಜನಾಂಗೀಯ ಸ್ವಚ್ಛಗೊಳಿಸುವಿಕೆ ಅಥವಾ ಎತ್ನಿಕ್ ಕ್ಲೆನ್ಸಿಂಗ್‌ನ ಹೆಸರಿನಲ್ಲಿ ರೊಹಿಂಗ್ಯಾಗಳ ಮೇಲೆ ನಡೆಸಿದ ದೌರ್ಜನ್ಯ. ಬೌದ್ಧರ ಗುಂಪುಗಳು ಹಾಗೂ ದೇಶದ ಭದ್ರತಾ ಪಡೆಗಳು ರೊಹಿಂಗ್ಯಾ ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಿದವು. ರೊಹಿಂಗ್ಯಾ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದವು. ಅಲ್ಲದೆ ರೊಹಿಂಗ್ಯಾಗಳ ನೂರಾರು ಹಳ್ಳಿಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದವು.
ಅಶಿನ್ ವಿರಾತು ಬೌದ್ಧ ಧರ್ಮದ ಅಹಿಂಸಾತ್ಮಕ ಬೋಧನೆಗಳನ್ನು ತಿರಸ್ಕರಿಸಿದ್ದಾನೆ. ಆತ ಯಂಗೋನ್ ರ್ಯಾಲಿಯಲ್ಲಿ ಹೇಳಿದ: ಬುದ್ಧನನ್ನು ವೈಭವೀಕರಿಸಿದ ಹಾಗೆ ಮಿಲಿಟರಿಯೊಂದಿಗೆ ಕೈಜೋಡಿಸಿರುವ ಕಾನೂನು ನಿರ್ಮಾಪಕರನ್ನು ವೈಭವೀಕರಿಸಬೇಕು. ‘‘ಸೇನೆ ಮಾತ್ರ ನಮ್ಮ ದೇಶ ಮತ್ತು ನಮ್ಮ ಧರ್ಮ ಎರಡನ್ನೂ ರಕ್ಷಿಸುತ್ತದೆ.’’

ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಇನ್ನೊಂದು ಪ್ರತಿಭಟನಾ ರ್ಯಾಲಿಯಲ್ಲಿ, ರೊಹಿಂಗ್ಯಾಗಳ ಮೇಲೆ ನಡೆಸಿದ ದೌರ್ಜನ್ಯಕ್ಕಾಗಿ ಮ್ಯಾನ್ಮಾರ್‌ನ ಸೇನೆಯ ವಿರುದ್ಧ ಮೊಕದ್ದಮೆಯ ವಿಚಾರಣೆಯನ್ನು ಮುಂದುವರಿಸುವ ಬಗ್ಗೆ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ತೆಗೆದುಕೊಂಡ ತೀರ್ಮಾನವನ್ನು ಖಂಡಿಸಿ ಆತ ಮಾತನಾಡಿದ್ದ. ಆಗ ಆತ ಕೋವಿಗಳನ್ನು ಕೈಗೆತ್ತಿಕೊಳ್ಳುವಂತೆ ಜನರಿಗೆ ಕರೆ ನೀಡಿದ. ‘‘ಯಾವ ದಿನ ಐಸಿಸಿ ಇಲ್ಲಿಗೆ ಬರುತ್ತದೋ ಆ ದಿನ ನಾನು ಕೋವಿಯನ್ನು ಕೈಗೆತ್ತಿಕೊಳ್ಳುತ್ತೇನೆ’’ ಎಂದು ಆತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ.

 ಇನ್ನೋರ್ವ ಬೌದ್ಧ ಭಿಕ್ಷುವಿಗೆ 82ರ ಹರೆಯ. ಆತನ ಹೆಸರು ಅಶಿನ್ ನ್ಯಾನಿಸಾರ. ಆತ ಸಿತಾಗು ಸಯದಾವ್ ಎಂದೇ ಜನಪ್ರಿಯನಾಗಿದ್ದಾನೆ.
ಸಿತಾಗು ಈಗ ಮ್ಯಾನ್ಮಾರ್‌ನ ಅತ್ಯಂತ ಪ್ರಭಾವಿ ಬೌದ್ಧ ಸನ್ಯಾಸಿ.
ಸುಟ್ಟುನಾಶ ಮಾಡಲಾದ ತಮ್ಮ ಹಳ್ಳಿಗಳಿಂದ ಸಾವಿರಾರು ರೊಹಿಂಗ್ಯಾಗಳು ಓಡಿ ಹೋಗುತ್ತಿರುವಾಗ, ಸಿತಾಗು ಸಯದಾವ್‌ಮ್ಯಾನ್ಮಾರ್‌ನ ಸೇನಾಧಿಕಾರಿಗಳ ಮುಂದೆ ಕುಳಿತು ಹೇಳಿದ: ‘‘ಮುಸ್ಲಿಮರು ವಿಶ್ವಸಂಸ್ಥೆಯನ್ನು ಬಹುಪಾಲು ಕೊಂಡುಕೊಂಡಿದ್ದಾರೆ.’’ ಮುಂದುವರಿಸಿ ಆತ ಹೇಳಿದ, ‘‘ಸೇನೆ ಮತ್ತು ಭಿಕ್ಷುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.’’

ಮ್ಯಾನ್ಮಾರ್‌ನ ಮಿಲಿಟರಿಗೆ ಸಂಬಂಧಿಸಿದ ಫೇಸ್‌ಬುಕ್‌ನ ಪುಟವೊಂದರಲ್ಲಿ ಮೇ ತಿಂಗಳಲ್ಲಿ ಸಿತಾಗು ಸೈನಿಕರ ನಡುವೆ ಹಲ್ಲು ಕಿರಿಯುತ್ತಿರುವ ಒಂದು ಚಿತ್ರದಲ್ಲಿ ಕಾಣಿಸಿಕೊಂಡ. ಆತ ತನ್ನ ಧರ್ಮದ ಅತ್ಯಂತ ದೊಡ್ಡ ತ್ಯಾಗವನ್ನೇ ಮಾಡಲು, ಕೊಡುಗೆ ನೀಡಲು ಮುಂದೆ ಬಂದಿದ್ದಾನೆ. ರಾಷ್ಟ್ರೀಯ ಉದ್ದೇಶಕ್ಕಾಗಿ ಆಧ್ಯಾತ್ಮಿಕ ಯೋಧರ ಒಂದು ಸೇನೆಯೇ ಆತ ನೀಡುವ ಕೊಡುಗೆ. ಮ್ಯಾನ್ಮಾರ್‌ನ ಸೇನಾ ಪಡೆಗಳ ಕಮಾಂಡರ್‌ಗೆ ಆತ ಹೇಳಿದ, ‘‘ಮ್ಯಾನ್ಮಾರ್‌ನಲ್ಲಿ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಬೌದ್ಧ ಸನ್ಯಾಸಿಗಳಿದ್ದಾರೆ. ನಿಮಗೆ ಅವರ ಅವಶ್ಯಕತೆ ಇದ್ದರೆ ನಾನು ಅವರಿಗೆ ಆರಂಭಿಸಲು ಹೇಳುತ್ತೇನೆ. ಇದು ಸುಲಭದ ಕೆಲಸ.’’

 ‘‘ಸಿತಾಗು ಸಯದಾವ್‌ನಂತಹ ಬಹಳ ಗೌರವಾನ್ವಿತರಾದ ಒಬ್ಬರು ಏನನ್ನಾದರೂ ಹೇಳಿದಾಗ ಜನ ಕಿವಿಗೊಟ್ಟು ಕೇಳುತ್ತಾರೆ’’ ಎಂದಿದ್ದಾರೆ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಾಮಾಜಿಕ ಮಾನವ ಶಾಸ್ತ್ರಜ್ಞರಾಗಿರುವ ಮತ್ತು ಮ್ಯಾನ್ಮಾರ್ ಸಂಜಾತ ಬಿನ್ ಮಾರ್ಮಾರ್ ಕೀ.

ಕೆಲವು ವರ್ಷಗಳ ಮಂದಗಾಮಿ ಮೈತ್ರಿ ಸರಕಾರದ ಆಡಳಿತದ ಬಳಿಕ ಪುನಃ ಈಗ ಶ್ರೀಲಂಕಾದಲ್ಲಿ ಧರ್ಮ ಮತ್ತು ಬುಡಕಟ್ಟು ವಾದದ ಒಂದು ಮಿಶ್ರಣ ಏರುಗತಿಯಲ್ಲಿ ಜನಪ್ರಿಯವಾಗುತ್ತಿದೆ. ಈ ಮಿಶ್ರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚಳವಳಿಯ ನೇತಾರ, ಚಾಂಪಿಯನ್: ಗೊಟಬಾಯ ರಾಜಪಕ್ಷೆ ಓರ್ವ ಮಾಜಿ ರಕ್ಷಣಾ ಸಚಿವ ಹಾಗೂ ಈ ವರ್ಷ ನಡೆಯುವ ಅಧ್ಯಕ್ಷೀಯ ಚುನಾವಣೆಯ ಓರ್ವ ಪ್ರಮುಖ ಅಭ್ಯರ್ಥಿ.

 ತನ್ನ ದೇಶದಲ್ಲಿ ಧರ್ಮವನ್ನು ರಕ್ಷಿಸುವುದಕ್ಕಾಗಿ ರಾಜಪಕ್ಷೆ ಪ್ರತಿಜ್ಞೆ ಮಾಡಿದ್ದಾರೆ. ಜನರಿಗೆ ವಾಗ್ದಾನ ನೀಡಿದ್ದಾರೆ. 2005ರಿಂದ 2015ರವರೆಗೆ ರಾಜಪಕ್ಷೆಯ ಸಹೋದರ ಹಾಗೂ ಮೂರು ದಶಕಗಳ ಕಾಲ ನಡೆದ ಅಂತರ್ಯುದ್ಧದ ಬರ್ಬರ ಅಂತ್ಯವನ್ನು ಬಲವಾಗಿ ಸಮರ್ಥಿಸಿದ್ದ ಓರ್ವ ರಾಷ್ಟ್ರೀಯವಾದಿ ಮಹೀಂದ ರಾಜಪಕ್ಷೆಯ ಆಡಳಿತ ಅಲ್ಲಿತ್ತು.

ಆಗ ಅವರು ತನ್ನನ್ನು ರಾಷ್ಟ್ರದ ಓರ್ವ ಆಧ್ಯಾತ್ಮಿಕ ರಕ್ಷಕರೆಂದು ಬಿಂಬಿಸಿಕೊಂಡಿದ್ದರು. ಶ್ರೀಲಂಕಾದ ದೇವಾಲಯಗಳ ಗೋಡೆಗಳ ಮೇಲೆ ರಾಜಪಕ್ಷೆ ಸಹೋದರರ ಚಿತ್ರಗಳು ರಾರಾಜಿಸಿದವು. ಮುಸ್ಲಿಮರು ಯಾವ ಪಂಥೀಯ ದೊಂಬಿಗಳಲ್ಲಿ ಮೃತಪಟ್ಟಿದ್ದರೋ ಅಂತಹ ದೊಂಬಿಗಳನ್ನು ಪ್ರಶಂಸಿಸಿದ್ದ ತೀವ್ರಗಾಮಿ ಬೌದ್ಧ ಗುಂಪುಗಳಿಗೆ ಹಣದ ಹೊಳೆ ಹರಿದು ಬಂತು. ಬೋಡು ಬಾಲ ಸೇನಾ ಅಥವಾ ಬೌದ್ಧಶಕ್ತಿ ಸೇನೆಯ ಸ್ಥಾಪಕರಲ್ಲೊಬ್ಬರಿಗೆ ರಾಜಧಾನಿ ಕೊಲಂಬೊದಲ್ಲಿ ಗಗನಚುಂಬಿ ಬೌದ್ಧ ಸಾಂಸ್ಕೃತಿಕ ಕೇಂದ್ರವೊಂದರ ನಿರ್ಮಾಣಕ್ಕಾಗಿ ದುಬಾರಿ ಬೆಲೆ ಬಾಳುವ ಜಮೀನನ್ನು ನೀಡಲಾಯಿತು ಕಳೆದ ವರ್ಷ ಈ ಸೇನೆಯ ನಾಯಕ ಕಲಗೋಡಾ ಅತ್ತೆ ಜ್ಞಾನ ಸಾರ ಥೆರೊ ಎಂಬಾತನಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಬದಲಾದ ರಾಜಕೀಯ ವಾತಾವರಣದಲ್ಲಿ ಕಳೆದ ಮೇ ತಿಂಗಳ ಮಧ್ಯ ಭಾಗದಲ್ಲಿ ಆತನಿಗೆ ರಾಷ್ಟ್ರಪತಿಗಳ ಕ್ಷಮಾದಾನ ದೊರಕಿತು. ಜೈಲಿಗೆ ಹೋಗುವ ಮೊದಲು ಆತ ‘ದಿ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ: ‘‘2,500 ವರ್ಷಗಳಿಂದ ನಾವು ಬೌದ್ಧ ಧರ್ಮದ ರಕ್ಷಕರಾಗಿದ್ದೇವೆ. ಮ್ಯಾನ್ಮಾರ್‌ನಲ್ಲಿರುವ ಬೌದ್ಧ ಭಿಕ್ಷುಗಳ ಕರ್ತವ್ಯ ಹೇಗೋ, ಹಾಗೆಯೇ ಈಗ ನಮ್ಮ ಶಾಂತಿಯುತ ದ್ವೀಪವನ್ನು ದಾಳಿಯಿಂದ ರಕ್ಷಿಸಲು ಪ್ರಯತ್ನಿಸುವುದು ನಮ್ಮ ಕರ್ತವ್ಯವಾಗಿದೆ’’


ಕೃಪೆ: ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್

Writer - ಹನ್ನಾಹ್ ಬೀಚ್

contributor

Editor - ಹನ್ನಾಹ್ ಬೀಚ್

contributor

Similar News