ಎನ್‍ ಡಿಟಿವಿಯ ಪ್ರಣಯ್ ರಾಯ್ ದಂಪತಿ ವಿರುದ್ಧ ಇನ್ನೊಂದು ಕೇಸ್ ದಾಖಲಿಸಿದ ಸಿಬಿಐ

Update: 2019-08-21 15:14 GMT

ಹೊಸದಿಲ್ಲಿ,ಆ.21: ಸಿಬಿಐ 2007-09ರ ಅವಧಿಯಲ್ಲಿನ ಹೂಡಿಕೆಯಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಎನ್‌ಡಿಟಿವಿಯ ಪ್ರವರ್ತಕರಾದ ಪ್ರಣಯ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ. ಎನ್‌ಡಿಟಿವಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ.

ರಾಯ್ ದಂಪತಿಯ ಜೊತೆ ಎನ್‌ಡಿಟಿವಿಯ ಸಿಇಒ ವಿಕ್ರಮಾದಿತ್ಯ ಚಂದ್ರ ಮತ್ತು ಅಪರಿಚಿತ ಸರಕಾರಿ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಒಳಸಂಚು,ವಂಚನೆ ಮತ್ತು ಭ್ರಷ್ಟಾಚಾರದ ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಬುಧವಾರ ತಿಳಿಸಿದರು.

ಬುಧವಾರ ಸಿಬಿಐ ತಂಡವು ಚಂದ್ರ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ ಎಂದರು.

ಎನ್‌ಡಿಟಿವಿಯು 2006, ನ.30ರಂದು ಲಂಡನ್‌ನಲ್ಲಿ ಸ್ಥಾಪಿಸಿದ್ದ ನೆಟ್‌ವರ್ಕ್ ಪಿಎಲ್‌ಸಿ(ಎನ್‌ಎನ್‌ಪಿಎಲ್‌ಸಿ) ಯಲ್ಲಿ ಆಗ ಜನರಲ್ ಇಲೆಕ್ಟ್ರಿಕ್‌ನ ಅಧೀನ ಕಂಪನಿಯಾಗಿದ್ದ ಎನ್‌ಸಿಬಿಯು ಮಾಡಿದ್ದ ಹೂಡಿಕೆಗಳ ಬಗ್ಗೆ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ.

2009ರಲ್ಲಿ ಎನ್‌ಎನ್‌ಪಿಎಲ್‌ಸಿ ಎಫ್‌ಡಿಐ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ)ಯಿಂದ ಅಂಗೀಕಾರವನ್ನು ಪಡೆದುಕೊಂಡಿತ್ತು. ಅದು ಒಟ್ಟು 163.43 ಮಿಲಿಯನ್ ಡಾ.ಗಳನ್ನು ಎಫ್‌ಡಿಐ ಅನ್ನು ಸ್ವೀಕರಿಸಿತ್ತು ಮತ್ತು ಸಂಕೀರ್ಣ ವಹಿವಾಟುಗಳ ಮೂಲಕ ವಿವಿಧ ಎನ್‌ಡಿಟಿವಿ ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಿತ್ತು ಎಂದು ಸಿಬಿಐ ಆರೋಪಿಸಿದೆ. 2014-2010ರ ನಡುವೆ ಎನ್‌ಡಿಟಿವಿ ವಿಶ್ವಾದ್ಯಂತ ಸುಮಾರು 32 ಅಂಗಸಂಸ್ಥೆಗಳನ್ನು ಸ್ಥಾಪಿಸಿದ್ದು, ಹೆಚ್ಚಿನವು ಹಾಲಂಡ್,ಬ್ರಿಟನ್,ದುಬೈ,ಮಲೇಷಿಯಾ ಮತ್ತು ಮಾರಿಷಿಯಸ್‌ನಂತಹ ತೆರಿಗೆ ಸ್ವರ್ಗಗಳಲ್ಲಿವೆ.

ಈ ಪೈಕಿ ಹೆಚ್ಚಿನ ಕಂಪನಿಗಳು ಯಾವುದೇ ವ್ಯವಹಾರಗಳನ್ನು ನಡೆಸುತ್ತಿರಲಿಲ್ಲ ಮತ್ತು ವಿದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದ್ದವು ಎಂದು ಅದು ಹೇಳಿದೆ.

ಇವೆಲ್ಲ ತೋರಿಕೆಯ ವಹಿವಾಟುಗಳಾಗಿದ್ದು,ಅಪರಿಚಿತ ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಿಂದ ಗಳಿಸಿದ್ದ ಹಣವನ್ನು ಎನ್‌ಡಿಟಿವಿ ಮೂಲಕ ಹೂಡಿಕೆ ಮಾಡಿದ್ದರು ಮತ್ತು ಸಂಕೀರ್ಣ ವಹಿವಾಟುಗಳು ಹಾಗೂ ಮುಖವಾಡ ಕಂಪನಿಗಳ ಮೂಲಕ ಅಕ್ರಮವಾಗಿ ಭಾರತಕ್ಕೆ ಮರಳಿ ತರಲಾಗಿತ್ತು ಎಂದು ಸಿಬಿಐ ಹೇಳಿದೆ.

ಸಿಬಿಐ ಆರೋಪಗಳನ್ನು ನಿರಾಕರಿಸಿರುವ ಎನ್‌ಡಿಟಿವಿ,ಈ ನಿರ್ಣಾಯಕ ಸಮಯದಲ್ಲಿ ಕಂಪನಿ ಮತ್ತು ಅದರ ಸ್ಥಾಪಕರಿಗೆ ಭಾರತೀಯ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ ಮತ್ತು ಕಂಪನಿಯು ಪತ್ರಿಕೋದ್ಯಮದ ಸಮಗ್ರತೆಗೆ ಬದ್ಧವಾಗಿದೆ. ಸುಳ್ಳು ಆರೋಪಗಳ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ವರದಿಗಾರಿಕೆಯನ್ನು ದಮನಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News