ಕಾಶ್ಮೀರ ಕುರಿತು ಜಿ7 ಶೃಂಗಸಭೆಯಲ್ಲಿ ಮೋದಿ ಜೊತೆ ಮಾತುಕತೆ: ಟ್ರಂಪ್

Update: 2019-08-21 18:32 GMT

ವಾಶಿಂಗ್ಟನ್, ಆ. 21: ಈ ವಾರಾಂತ್ಯದಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 ಶೃಂಗ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದಾಗ, ಕಾಶ್ಮೀರದ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

 ‘‘ಈ ವಾರಾಂತ್ಯದಲ್ಲಿ, ನಾನು ಫ್ರಾನ್ಸ್‌ನಲ್ಲಿ ಪ್ರಧಾನಿ ಮೋದಿ ಜೊತೆ ಇರುತ್ತೇನೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಾಶ್ಮೀರ ವಿಷಯದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಣಿಸಲು ನಾವು ಪ್ರಯತ್ನಿಸುತ್ತೇವೆ’’ ಎಂದು ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ನುಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಫೋನ್‌ನಲ್ಲಿ ಮಾತುಕತೆ ನಡೆಸಿದ ಒಂದು ದಿನದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಉಭಯ ದೇಶಗಳ ನಡುವೆ ‘ಅಗಾಧ ಸಮಸ್ಯೆ’ಗಳಿವೆ ಎಂದು ಹೇಳಿರುವ ಟ್ರಂಪ್, ಮಧ್ಯಸ್ಥಿಕೆ ವಹಿಸುವುದು ಅಥವಾ ಏನೇ ಆದರೂ ನನ್ನಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದಿದ್ದಾರೆ.

‘‘ಮಧ್ಯಸ್ಥಿಕೆ ವಹಿಸಲು ಅಥವಾ ಏನನ್ನೇ ಆದರೂ ಮಾಡಲು ನನ್ನಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ. ಇಬ್ಬರೊಂದಿಗೂ ನಾನು ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಆದರೆ, ಈ ಕ್ಷಣದಲ್ಲಿ ಅವರು (ಭಾರತ ಮತ್ತು ಪಾಕಿಸ್ತಾನ) ಸ್ನೇಹತರಾಗಿಲ್ಲ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News