ಲಂಡನ್‌ನಲ್ಲಿರುವ ಅಂಬೇಡ್ಕರ್ ಮ್ಯೂಸಿಯಂ ಮುಚ್ಚಲು ನಿರ್ಧಾರ

Update: 2019-08-22 15:23 GMT

ಲಂಡನ್, ಆ. 22: 1920ರ ದಶಕದಲ್ಲಿ ವಿದ್ಯಾರ್ಥಿಯಾಗಿದ್ದಾಗ ಡಾ. ಬಿ.ಆರ್. ಅಂಬೇಡ್ಕರ್ ತಂಗಿದ್ದ ವಾಯುವ್ಯ ಲಂಡನ್‌ನ ಮನೆಯನ್ನು ಈಗ ಮ್ಯೂಸಿಯಂ (ವಸ್ತುಸಂಗ್ರಹಾಲಯ) ಮಾಡಲಾಗಿದ್ದು, ಅದು ಮುಂದಿನ ತಿಂಗಳು ಮುಚ್ಚುವ ಆತಂಕವನ್ನು ಎದುರಿಸುತ್ತಿದೆ.

ಮನೆಯನ್ನು ಮ್ಯೂಸಿಯಂ ಮಾಡಲು ಸ್ಥಳೀಯ ನಗರಸಭೆಯು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

10 ಕಿಂಗ್ ಹೆನ್ರೀಸ್ ರಸ್ತೆಯಲ್ಲಿರುವ ಈ ಮನೆಯನ್ನು ಮಹಾರಾಷ್ಟ್ರ ಸರಕಾರವು 2015 ಸೆಪ್ಟಂಬರ್‌ನಲ್ಲಿ 3.1 ಮಿಲಿಯ ಪೌಂಡ್ (ಸುಮಾರು 2,700 ಕೋಟಿ ರೂಪಾಯಿ)ಗೆ ಖರೀದಿಸಿತ್ತು. ನಾಲ್ಕು ಮಹಡಿಗಳನ್ನು ಹೊಂದಿರುವ ಮನೆಯು 2,550 ಚದರ ಅಡಿ ಸ್ಥಳವನ್ನು ಹೊಂದಿದೆ. ಅದನ್ನು ವಸ್ತುಸಂಗ್ರಹಾಲಯವಾಗಿ 2015 ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಮನೆಯನ್ನು ಮ್ಯೂಸಿಯಂ ಬಳಕೆಗೆ ನೀಡಿದರೆ, ವಾಸ್ತವ್ಯ ಸ್ಥಳದ ಕೊರತೆಯುಂಟಾಗುತ್ತದೆ ಎಂಬ ನಿರ್ಧಾರಕ್ಕೆ ನಗರಸಭೆ ಬಂದಿದೆ ಎಂದು ನಗರಸಭೆಯ ವಕ್ತಾರರೊಬ್ಬರು ಹೇಳಿದ್ದಾರೆ.

► ಮಹಾರಾಷ್ಟ್ರ ಸರಕಾರದಿಂದ ಮೇಲ್ಮನವಿ

ಕ್ಯಾಮ್‌ಡೆನ್ ನಗರಸಭೆಯ ನಿರ್ಧಾರದ ವಿರುದ್ಧ ಮಹಾರಾಷ್ಟ್ರ ಸರಕಾರವು ಲಂಡನ್‌ನಲ್ಲಿರುವ ಸಾಲಿಸಿಟರ್‌ಗಳ ಮೂಲಕ ಮೇಲ್ಮನವಿ ಸಲ್ಲಿಸಿದೆ. ಮನವಿಯ ವಿಚಾರಣೆಯು ಸೆಪ್ಟಂಬರ್ 24ರಂದು ಸ್ವತಂತ್ರ ಆಯೋಗವೊಂದರ ಮುಂದೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News