ಬೆಂಗಳೂರು, ಮುಂಬೈಯಲ್ಲಿ ಬಡವರಿಗೆ ಟ್ಯಾಂಕರ್ ನೀರಿನ ವೆಚ್ಚದ ಬರೆ

Update: 2019-08-23 14:43 GMT

ಹೊಸದಿಲ್ಲಿ, ಆ.23: ಮುಂಬೈಯಲ್ಲಿ ಪೈಪ್ ಮೂಲಕ ಪೂರೈಸುವ (ನಳ್ಳಿ)ನೀರಿಗಿಂತ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿನ ದರ ಸುಮಾರು 52 ಪಟ್ಟು ಹೆಚ್ಚಾಗಿದೆ. ಬೆಂಗಳೂರು ಮತ್ತು ಮುಂಬೈಯಲ್ಲಿ ನಳ್ಳಿ ನೀರಿನ ಸಂಪರ್ಕವೇ ಇರದ ಜನರು ಅಧಿಕ ದರ ತೆತ್ತು ಟ್ಯಾಂಕರ್ ಮೂಲಕ ಪೂರೈಸುವ ನೀರನ್ನು ಅವಲಂಬಿಸುವ ಪರಿಸ್ಥಿತಿಯಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಮುಂಬೈ ಮತ್ತು ಬೆಂಗಳೂರು ಸಹಿತ ವಿಶ್ವದ 15 ನಗರಗಳಲ್ಲಿ ನೀರಿನ ಲಭ್ಯತೆ ಮತ್ತು ವೆಚ್ಚದ ಬಗ್ಗೆ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಒದಗಿಸಲಾಗಿದೆ. ಬೆಂಗಳೂರು ಹಾಗೂ ಮುಂಬೈಯಲ್ಲಿ ನಳ್ಳಿ ನೀರು ಪೂರೈಕೆ ಅನಿಯಮಿತವಾಗಿರುತ್ತದೆ. ಬೆಂಗಳೂರಿನಲ್ಲಿ ವಾರದ ಮೂರು ದಿನ ತಲಾ 3 ಗಂಟೆ ನಳ್ಳಿ ನೀರು ಪೂರೈಸಲಾಗುತ್ತದೆ. ಮುಂಬೈಯಲ್ಲಿ ದಿನಕ್ಕೆ 7 ಗಂಟೆ ನಳ್ಳಿ ನೀರು ಪೂರೈಸಲಾಗುತ್ತದೆ. ಆದರೆ ಕ್ರಮಬದ್ಧವಲ್ಲದ ಬಡಾವಣೆಗಳಲ್ಲಿ ವಾಸಿಸುತ್ತಿರುವವರು ನಳ್ಳಿ ನೀರಿನ ಸಂಪರ್ಕವೇ ಇಲ್ಲದ ಕಾರಣ ದುಬಾರಿ ಹಣ ನೀಡಿ ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯತೆಯಿದೆ.

ನೀರಿನ ಬಿಕ್ಕಟ್ಟಿನ ಕುರಿತ ಸೂಚನೆ ಕಡೆಗಣನೆ:

ಪ್ರಾಕೃತಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯ ನಿಟ್ಟಿನಲ್ಲಿ ಎದುರಾಗುವ ಸವಾಲಿನ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ‘ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್’ 2015ರಲ್ಲಿ ಒಂದು ಕಾರ್ಯಯೋಜನೆ ಆರಂಭಿಸಿತ್ತು. ‘ಸಮಾನ ನಗರದ ಕಡೆಗೆ’ ಎಂಬ ಹೆಸರಿನ ಈ ಯೋಜನೆಯಲ್ಲಿ ಅಧಿಕ ಸುಸ್ಥಿರ ಹಾಗೂ ಉತ್ಪಾದಕ ನಗರಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದ ಆಧಾರದಲ್ಲಿ ‘ದಕ್ಷಿಣ ವಿಶ್ವದಲ್ಲಿ ನಿಭಾಯಿಸಲಾಗದ ಮತ್ತು ಕುಡಿಯಲಾಗದ ಗ್ರಾಮೀಣ ನೀರು ಅಭಿವೃದ್ಧಿ ಬಗ್ಗೆ ಮರುಚಿಂತನೆ ’ ಎಂಬ ಶೀರ್ಷಿಕೆಯ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದೆ. ಮ್ಯಾಂಚೆಸ್ಟರ್ ವಿವಿಯ ಪ್ರೊಫೆಸರ್ ಡಯಾನಾ ಮಿಟ್ಲಿನ್, ಯುನಿವರ್ಸಿಟಿ ಕಾಲೇಜು, ಲಂಡನ್‌ನ ಸಂದರ್ಶಕ ಪ್ರೊಫೆಸರ್ ಡೇವಿಡ್ ಸ್ಯಾಟರ್‌ವೈಟ್ ಮತ್ತು ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ವಿಶ್ಲೇಷಕ ಜಿಲಿಯನ್ ಡೂ ಅವರೂ ಅಧ್ಯಯನ ತಂಡದಲ್ಲಿದ್ದರು. ವಿಶ್ವಾಸಾರ್ಹ ಮತ್ತು ಕೈಗೆಟಕುವ ದರದ ನೀರನ್ನು ನ್ಯಾಯಸಮ್ಮತ ಪ್ರಮಾಣದಲ್ಲಿ ಪಡೆಯುವುದು ಮಾನವ ಹಕ್ಕು ಆಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆ 2015ರಲ್ಲಿ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ದೇಶಗಳು ನಡೆಸಿರುವ ಪ್ರಯತ್ನಗಳ ಕುರಿತಾದ ಅಂಕಿ ಅಂಶವು ಜಾಗತಿಕ ನೀರಿನ ಬಿಕ್ಕಟ್ಟನ್ನು ಕಡೆಗಣಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ದಕ್ಷಿಣ ಏಶ್ಯಾದಲ್ಲಿ ಮುಂಬೈ, ಬೆಂಗಳೂರು, ಕರಾಚಿ, ಡಾಕಾ ಮತ್ತು ಕೊಲಂಬೋ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇವು ತ್ವರಿತವಾಗಿ ನಗರೀಕರಣಗೊಳ್ಳುತ್ತಿರುವ ಪಟ್ಟಣಗಳಾಗಿದ್ದು ಜನಸಂಖ್ಯೆಯ ಗಾತ್ರದ ಬೃಹತ್ ಶ್ರೇಣಿಯನ್ನು ಪರಿಗಣಿಸಿ ಹಾಗೂ ಕ್ಷೇತ್ರಕಾರ್ಯ ನಡೆಸಲು ಸಂಶೋಧಕರ ಲಭ್ಯತೆಯಿದೆ ಎಂಬ ಕಾರಣಕ್ಕೆ ಈ ಆಯ್ಕೆ ನಡೆದಿದೆ.

 ಒಂದು ಕುಟುಂಬವು ತನ್ನ ಆದಾಯದ ಶೇ.3ರಿಂದ 5ರಷ್ಟು ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ನೀರಿಗಾಗಿ ವ್ಯಯಿಸಬಾರದು ಎಂದು ವಿಶ್ವಬ್ಯಾಂಕ್ ಶಿಫಾರಸು ಮಾಡಿದೆ. ಆದರೆ ಕುಟುಂಬದವರು ಟ್ಯಾಂಕರ್ ನೀರು ಪಡೆಯುವವರಾಗಿದ್ದರೆ ಇದಕ್ಕಿಂತ ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಅವರು ವೆಚ್ಚ ಮಾಡಬೇಕಾಗುತ್ತದೆ. ಮುಂಬೈಯಲ್ಲಿ ನಳ್ಳಿ ನೀರಿನ ದರಕ್ಕಿಂತ ಟ್ಯಾಂಕರ್ ನೀರಿನ ದರ 52 ಪಟ್ಟು ಹೆಚ್ಚಿದ್ದರೆ, ಬೆಂಗಳೂರಿನಲ್ಲಿ 12 ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ನೀರಿನ ಮಾಫಿಯಾವಿದೆ. ಸಮುದಾಯ ನೀರು ಪೂರೈಕೆ (ಸಾರ್ವಜನಿಕ ನಳ್ಳಿ ನೀರು ಪೂರೈಕೆ) ಸ್ಥಳದಿಂದ ನೀರನ್ನು ಸಂಗ್ರಹಿಸಿ ಅಧಿಕ ಬೆಲೆಗೆ ಇದನ್ನು ಅಗತ್ಯವಿರುವವರಿಗೆ ಒದಗಿಸುವ ಮಾಫಿಯಾ ಕಾರ್ಯಾಚರಿಸುತ್ತಿದೆ. ಕೊಲಂಬೋದಲ್ಲಿ ಚರ ಜನಸಂಖ್ಯೆ( ಹಗಲಿನಲ್ಲಿ ನಗರಕ್ಕೆ ಆಗಮಿಸಿ ರಾತ್ರಿ ವೇಳೆ ಹೊರ ಹೋಗುವವರು)ಯ ಪ್ರಮಾಣ ಹೆಚ್ಚಿದೆ. ಇದು ನೀರಿನ ಬಳಕೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ.

ಬಡವರಿಗಿಲ್ಲ ನೀರಿನ ಸಬ್ಸಿಡಿ ವ್ಯವಸ್ಥೆ

ಭಾರತದಲ್ಲಿ ನಳ್ಳಿ ನೀರಿನ ದರಕ್ಕೆ ಸಬ್ಸಿಡಿ ಅನ್ವಯವಾಗುತ್ತದೆ. ಆದ್ದರಿಂದ ನಳ್ಳಿ ನೀರು ಸಂಪರ್ಕ ಹೊಂದಿರದ ಬಡವರಿಗೆ ಸಬ್ಸಿಡಿ ಲಭಿಸುತ್ತಿಲ್ಲ. ಭಾರತದಲ್ಲಿ, ನೀರು ಪಡೆಯಲು ಎಷ್ಟೇ ವೆಚ್ಚ ಮಾಡಲೂ ಸಿದ್ಧರಿರುವ ಮಧ್ಯಮ ವರ್ಗ ಹಾಗೂ ಮೇಲ್ವರ್ಗದ ಜನತೆಗೆ ನೀರಿನ ಸಬ್ಸಿಡಿ ನೀಡಲಾಗುತ್ತಿದೆ. ನಿಜವಾಗಿ ಸಬ್ಸಿಡಿಯ ಅಗತ್ಯವಿದ್ದವರಿಗೆ ದೊರಕುತ್ತಿಲ್ಲ ಎಂದು ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಫೆಲೊ ಆಗಿರುವ ಕಾರ್ನೆಲ್ ವಿವಿಯ ಪ್ರೊಫೆಸರ್ ಡಾ ವಿಕ್ಟೋರಿಯಾ ಬೀರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News