370ನೇ ವಿಧಿ ರದ್ದತಿ ಖಂಡಿಸಿ ಪ್ರತಿಭಟನೆ; ಹಲವರ ಬಂಧನ

Update: 2019-08-24 12:12 GMT

ಬೆಂಗಳೂರು, ಆ.24: ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ಹಾಗೂ 35 ಎ ರದ್ದು ಮಾಡುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಆರ್‌ವಿಎಸ್‌ಪಿ ಕಾರ್ಯಕರ್ತರಿಂದು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದ ನೂರಾರು ಜನ ಸಂಘಟನೆಯ ಕಾರ್ಯಕರ್ತರು, ದೇಶದಲ್ಲಿ ಎನ್‌ಡಿಎ ಸರಕಾರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದೆ. ಸಂವಿಧಾನಾತ್ಮಕವಾಗಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ, ಮಿಲಟರಿ ಆಡಳಿತ ಹೇರಿಕೆ ಮಾಡಿರುವುದು ದಮನಕಾರಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಯಾರ ಜತೆಗೂ ಚರ್ಚಿಸದೆ ಏಕಪಕ್ಷೀಯವಾಗಿ ಕೈಗೊಂಡಿರುವ ಈ ತೀರ್ಮಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಲ್ಲದು. ಇದು ಸರ್ವಾಧಿಕಾರ ಧೋರಣೆಯ ಪ್ರತೀಕ ಎಂದು ಖಂಡಿಸಿದರು.

ಸಂಘಟಕ ದುಶ್ಯಂತ್ ದುಬೆ ಮಾತನಾಡಿ, ಕೇಂದ್ರ ಸರಕಾರವು ವಿಶೇಷ ಸ್ಥಾನ ಮಾನ ರದ್ದು ಮಾಡಿರುವುದನ್ನು ಖಂಡಿಸಿ ಅಲ್ಲಿನ ಜನರೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಮೋದಿ ಹಾಗೂ ಅಮಿತ್ ಶಾ ಬಲವಂತವಾಗಿ ಇದನ್ನು ಅವರ ಮೇಲೆ ಹೇರಿಕೆ ಮಾಡಲು ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದುದಾಗಿದೆ ಎಂದು ತಿಳಿಸಿದರು.

370ನೇ ವಿಧಿ ರದ್ದುಗೊಳಿಸಿ ಕೇಂದ್ರ ಸರಕಾರ ಸಂವಿಧಾನಕ್ಕೆ ವಿರುದ್ಧವಾದ ತೀರ್ಮಾನ ಕೈಗೊಂಡಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತಷ್ಟು ಅಸ್ಥಿರತೆ ಉಂಟಾಗಲಿದೆ. ಕಾರ್ಪೊರೇಟ್ ವಲಯದ ಬಂಡವಾಳಶಾಹಿಗಳಿಗೆ ಅಲ್ಲಿ ಉದ್ಯಮ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಿದರು. ಅಲ್ಲದೆ, ಸಂಘಟನೆಯ ಮುಖಂಡರಾದ ದುಶ್ಯಂತ್ ದುಬೆ, ಸಮೀರ್ ಕುಲಕರ್ಣಿ, ಸುನಿಲ್ ಕೃಷ್ಣನ್ ಸೇರಿದಂತೆ ಮತ್ತಿತರರನ್ನು ಬಂಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News