ಅರುಣ್ ಜೇಟ್ಲಿ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ

Update: 2019-08-24 12:22 GMT

ಬೆಂಗಳೂರು, ಆ. 24: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಗೋವಿಂದ ಕಾರಜೋಳ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪಕ್ಷಕ್ಕೆ ಆಘಾತ: ಅರುಣ್ ಜೇಟ್ಲಿ ನಿಧನದಿಂದ ಬಿಜೆಪಿಗೆ ದೊಡ್ಡ ಆಘಾತವಾಗಿದೆ. ದೇಶ ಕಂಡ ಅಪರೂಪದ ಹಣಕಾಸು ಸಚಿವ ಜೇಟ್ಲಿ ಅವರ ಆಡಳಿತ ವೈಖರಿಯನ್ನ ಜಗತ್ತೇ ಮೆಚ್ಚಿತ್ತು. ಲೋಕಸಭೆಯಲ್ಲಿ ಮಾತನಾಡಲು ಅವರ ಎದ್ದು ನಿಂತಾಗ ಸದನದ ಹೊರಗಡೆ ಇದ್ದ ಸದಸ್ಯರು ಒಳಗೆ ಬಂದು ಕೂರುತ್ತಿದ್ದರು ಎಂದು ಸಿಎಂ ಬಿಎಸ್‌ವೈ ಸ್ಮರಿಸಿದ್ದಾರೆ.

ವಿಪಕ್ಷಗಳು ಒಪ್ಪುವ ರೀತಿ ಅವರು ಕೆಲಸ ಮಾಡುತ್ತಿದ್ದರು. ಇಪ್ಪತ್ತು ದಿನಗಳ ಹಿಂದೆ ಜೇಟ್ಲಿ ನನಗೆ ಆಹ್ವಾನ ನೀಡಿದ್ದರು. ಇಪ್ಪತ್ತೈದು ನಿಮಿಷ ದೇಶ, ರಾಜ್ಯದ ರಾಜಕೀಯ ಸ್ಥಿತಿ ಕುರಿತು ಮಾತುಕತೆ ನಡೆಸಿದ್ದೆವು. ಕರ್ನಾಟಕ ಬಿಜೆಪಿ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಮುತ್ಸದ್ದಿ ನಾಯಕ: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನ ನನಗೆ ಅತೀವ ದುಃಖ ತಂದಿದೆ. ಅವರೊಬ್ಬ ಮುತ್ಸದ್ದಿ ನಾಯಕ. ಅವರು ಯಾವುದೇ ಪಕ್ಷಕ್ಕೆ ಸೇರಿರಲಿ. ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಹಾಗೂ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ನಷ್ಟ: ಜೇಟ್ಲಿ ನಿಧನ ದೇಶ ಮತ್ತು ಬಿಜೆಪಿಗೆ ಅಪಾರ ನಷ್ಟ ಉಂಟಾಗಿದೆ. ವಿತ್ತ ಮತ್ತು ರಕ್ಷಣಾ ಸಚಿವರಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ ಮತ್ತು ಅವಿಶ್ರಾಂತ ಎಂದು ಸಚಿವ ಗೋವಿಂದ ಎಂ.ಕಾರಜೋಳ ಅವರು ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.

ಮೇಲ್ಪಂಕ್ತಿಯಲ್ಲಿದ್ದರು: ಜೇಟ್ಲಿ ಅವರ ಸಾವಿನ ಸುದ್ದಿ ಕೇಳಿ ಬೇಸರವಾಗಿದೆ. ಅವರು ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಸಂಸದೀಯ ಪಟುಗಳಲ್ಲಿ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಸಂವಿಧಾನ, ಕಾನೂನು, ಸಾರ್ವಜನಿಕ ನೀತಿ ಹಾಗೂ ಆಡಳಿತದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದವರು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸ್ಮರಣೆ ಮಾಡಿದ್ದಾರೆ.

ಅರುಣ್ ಜೇಟ್ಲಿ ಸಾವಿನ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News