ಬಿಬಿಎಂಪಿ ಚುನಾವಣೆಗೆ ಒಂದು ತಿಂಗಳಷ್ಟೇ ಬಾಕಿ: ಮೇಯರ್ ಪಟ್ಟಕ್ಕಾಗಿ ಬಿಜೆಪಿಯಲ್ಲಿ ಭಾರೀ ಪೈಪೋಟಿ

Update: 2019-08-24 12:21 GMT

ಬೆಂಗಳೂರು, ಆ.24: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಗಳ ಅಧಿಕಾರದ ಅವಧಿ ಸೆಪ್ಟೆಂಬರ್ ಕೊನೆಗೊಳ್ಳಲಿದ್ದು, ಮುಂದಿನ ಮೇಯರ್ ಪಟ್ಟಕ್ಕಾಗಿ ಬಿಜೆಪಿಯಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಪತನಗೊಳಿಸಿ, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೇ ರೀತಿಯಲ್ಲಿ ಬಿಬಿಎಂಪಿಯಲ್ಲಿಯೂ ಮೈತ್ರಿ ಆಡಳಿತ ಕೊನೆಗಾಣಿಸಿ, ಅಧಿಕಾರಕ್ಕೇರಲು ಮುಂದಾಗಿದೆ. ಇದೇ ವೇಳೆಯಲ್ಲಿ ಮುಂದಿನ ಮೇಯರ್ ಯಾರಾಗಬೇಕು ಎಂಬ ಚರ್ಚೆಗಳು ಆರಂಭವಾಗಿದ್ದು, ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರುಗಳ ಮೂಲಕ ಈಗಾಗಲೇ ಲಾಬಿ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.

ಬಿಬಿಎಂಪಿಯಲ್ಲಿ ಶಾಸಕರು ಹಾಗೂ ಸಂಸದರ ನೆರವಿನೊಂದಿಗೆ ಆಡಳಿತ ನಡೆಸಿದ ಮೈತ್ರಿ ಪಕ್ಷಗಳು ಈಗ ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಪತನವಾಗಿ, ಬಿಜೆಪಿ ಗದ್ದುಗೆ ಏರಲು ಉತ್ಸುಕವಾಗಿದೆ.

ಬೆಂಗಳೂರಿನ 4 ಕಾಂಗ್ರೆಸ್ ಮತ್ತು ಒಬ್ಬರು ಜೆಡಿಎಸ್ ಶಾಸಕರನ್ನು ಸಭಾಧ್ಯಕ್ಷ ಅನರ್ಹಗೊಳಿಸಿರುವ ನಿಟ್ಟಿನಲ್ಲಿ ಅವರಿಗೆ ಮತದಾನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ, ಆ ಶಾಸಕರ ಬೆಂಬಲಿತ ಸದಸ್ಯರು ಮೈತ್ರಿ ವಿರುದ್ಧವಾಗಿ ಮತ ಚಲಾಯಿಸುವ ಸಾಧ್ಯತೆಯಿದೆ. ಹೀಗಾಗಿ, ಮೈತ್ರಿಪರ ಮತಗಳ ಸಂಖ್ಯೆ ಕಡಿಮೆಯಾಗಲಿದ್ದು, ಬಿಜೆಪಿ ಮೇಲುಗೈ ಸಾಧಿಸಲಿದೆ.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ಉಪ ಮೇಯರ್ ಭದ್ರೇಗೌಡ ಅವಧಿ ಸೆ. 28ಕ್ಕೆ ಅಂತ್ಯವಾಗಲಿದೆ. ಅದರಿಂದಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮೆಯರ್ ಮತ್ತು ಉಪಮೆಯರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಆಕಾಂಕ್ಷಿಗಳು ತಾವು ಮೆಯರ್ ಅಭ್ಯರ್ಥಿ ಎಂಬುದನ್ನು ಬಿಜೆಪಿ ವರಿಷ್ಠರ ಗಮನಕ್ಕೆ ತರಲು ಕಸರತ್ತು ಆರಂಭಿಸಿದ್ದಾರೆ.

ಪಕ್ಷೇತರರು ಅತಂತ್ರ?: ಕಳೆದ ನಾಲ್ಕು ವರ್ಷಗಳಿಂದ ಮೈತ್ರಿ ಆಡಳಿತವನ್ನು ಬೆಂಬಲಿಸಿ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸ್ಥಾನ ಪಡೆದಿದ್ದ ಪಾಲಿಕೆ ಸದಸ್ಯರು ಈ ಬಾರಿ ಅತಂತ್ರವಾಗಲಿದ್ದಾರೆ. ಬಿಜೆಪಿಗೆ ಅಧಿಕಾರ ಪಡೆಯಲು ಅಗತ್ಯವಿರುವಷ್ಟು ಬೆಂಬಲವಿದೆ. ಅಲ್ಲದೆ, ಅನರ್ಹ ಶಾಸಕರ ಬೆಂಬಲಿಗರೂ ಮತ ಚಲಾಯಿಸಲಿದ್ದಾರೆ. ಅದರ ಪರಿಣಾಮ ಪಕ್ಷೇತರರ ಬೆಂಬಲ ಅಗತ್ಯವಿರುವುದಿಲ್ಲ.

ಆಕಾಂಕ್ಷಿ ಪಟ್ಟಿಯಲ್ಲಿ ಹಲವರು: ಮೇಯರ್ ಸ್ಥಾನದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಪದ್ಮನಾಭರೆಡ್ಡಿ, ಉಮೇಶ್ ಶೆಟ್ಟಿ, ಎಲ್.ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ಹಲವರಿದ್ದಾರೆ. ಈಗಾಗಲೇ ಇವರೆಲ್ಲರೂ ತಮ್ಮ ನಾಯಕರ ಮೂಲಕ ಲಾಬಿ ಶುರು ಮಾಡಿದ್ದಾರೆ.

ಸಚಿವರಿಗೆ ಸಂಕಟ: ಗೆದ್ದಾಗಲೂ, ಸೋತಾಗಲೂ ಜತೆಗಿರುವ ಪಾಲಿಕೆ ಸದಸ್ಯರಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನ ಕೊಡಿಸಲು ಇದೀಗ ಬಿಬಿಎಂಪಿ ವ್ಯಾಪ್ತಿಯ ಸಚಿವರಿಗೆ ಸಂಕಟ ಶುರುವಾಗಿದೆ. ಈಗಷ್ಟೇ ಸಚಿವರಾದ ಅಶೋಕ್, ಸೋಮಣ್ಣ, ಅಶ್ವತ್ಥನಾರಾಯಣ ತಮ್ಮ ಬೆಂಬಲಿಗರಿಗೆ ಕೊಡಿಸಲು ಲಾಬಿ ಆರಂಭ ಮಾಡಿದ್ದಾರೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News