ಹಾನಿಕಾರಕ ಔಷಧಿ ಬಳಕೆ ಆರೋಪ: ಜಿಮ್‌ಗಳ ಮೇಲೆ ದಾಳಿ, ತರಬೇತುದಾರ ವಶಕ್ಕೆ

Update: 2019-08-24 12:23 GMT

ಬೆಂಗಳೂರು, ಆ.24: ಉತ್ತಮ ದೇಹದಾರ್ಢ್ಯ ಹೊಂದಲು ಬರುತ್ತಿದ್ದವರಿಗೆ ಹಾನಿಕಾರಕ ಸ್ಟಿರಾಯ್ಡಿ ಔಷಧಿ ನೀಡುತ್ತಿದ್ದ ಆರೋಪದಡಿ ಜಿಮ್‌ಗಳ ಮೇಲೆ ಚಾಮರಾಜಪೇಟೆ ಠಾಣಾ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿ ಹಾನಿಕಾರಕ ಸ್ಟಿರಾಯ್ಡಿ ಔಷಧಿ ಜಪ್ತಿ ಮಾಡುವ ಜತೆಗೆ, ಜಿಮ್ ತರಬೇತುದಾರ ಶಿವಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯು ಜಿಮ್‌ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡಿ ನೀಡುತ್ತಿರುವುದು ದಾಳಿಯಲ್ಲಿ ಪತ್ತೆಯಾಗಿದೆ. ಜಿಮ್‌ನಲ್ಲಿ ಹಲವು ಸ್ಟಿರಾಯ್ಡಿ ಔಷಧಿಗಳು ಪತ್ತೆಯಾಗಿದ್ದವು. ದಾಳಿ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳು ಜೊತೆಗೆ ಕೆಲವು ಪ್ರೊಟೀನ್ ಬಾಟಲ್‌ಗಳು ಸಹ ಪತ್ತೆಯಾಗಿವೆ ಎನ್ನಲಾಗಿದೆ.

ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News