ಮಣ್ಣಿನ ಗಣೇಶ ಮೂರ್ತಿ ಬಳಸಿ, ಪರಿಸರ ಉಳಿಸಿ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-08-24 13:53 GMT

ಬೆಂಗಳೂರು, ಆ.24: ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ) ಗಣೇಶನ ಬದಲಿಗೆ ಮಣ್ಣಿನ ಗಣೇಶನನ್ನು ಪೂಜಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯಿರಿ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಕರೆ ನೀಡಿದ್ದಾರೆ.

ಶನಿವಾರ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬಾಂಧವ ಸಂಸ್ಥೆ ಆಯೋಜಿಸಿದ್ದ ಬೃಹತ್ ಜಾಗೃತಿ ಆಭಿಯಾನದ ಜಾಥದಲ್ಲಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಈ ಬಾರಿ ನಗರದೆಲ್ಲೆಡೆ ಮಣ್ಣಿನ ಗಣೇಶನ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಿಒಪಿಯಿಂದ ತಯಾರಿಸಿದ್ದ ದೊಡ್ಡ ಗಣೇಶ ಮೂರ್ತಿಗಳನ್ನು ಪೂಜಿಸಿ ಕೆರೆಗಳಲ್ಲಿ ವಿಸರ್ಜನೆ ಮಾಡಿದಾಗ ನೀರಿನಲ್ಲಿ ಮೂರ್ತಿಗಳು ವಿಲೀನವಾಗುವುದಿಲ್ಲ. ನೀರಿನ ಮೇಲೆ ತೇಲುತ್ತಿರುತ್ತದೆ. ಹೀಗಾಗಿ ಎಲ್ಲರೂ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜಿಸಿ ಎಂದರು.

ಅಲ್ಲದೆ, ಮಕ್ಕಳು ನೂರಾರು ಮಣ್ಣಿನ ಗಣೇಶನ ಮೂರ್ತಿಯನ್ನು ಪ್ರದರ್ಶಿಸುವ ಮೂಲಕ ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜಾಗೃತಿ ಜಾಥ ನಡೆಸಲಿದ್ದಾರೆ. ಸಾರ್ವಜನಿಕರಿಗೆ ಪ್ರತಿ ಗೌರಿಗಣೇಶ ಹಬ್ಬದಲ್ಲೂ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜಿಸಲು, 5 ಸಾವಿರದೊಂದು ಮಣ್ಣಿನ ಗಣೇಶ ಮೂರ್ತಿಗಳನ್ನು ಬಾಂಧವ ಸಂಸ್ಥೆ ಉಚಿತವಾಗಿ ವಿತರಣೆ ಮಾಡಲಿದೆ ಎಂದು ತಿಳಿಸಿದರು.

ಜಯನಗರದ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಕೆರೆಯಲ್ಲಿ ಕರಗುವಂತಹ ಮಣ್ಣಿನ ಮೂರ್ತಿಯನ್ನಷ್ಟೇ ಬಳಸಿ. ಇನ್ನು, 5 ಸಾವಿರ ಮಣ್ಣಿನ ಗಣೇಶಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚಲಾಗುವುದು. ಜೊತೆಗೆ ಶಾಲೆಗಳಲ್ಲೂ ಈ ಕುರಿತು ಕಾರ್ಯಾಗಾರ ನಡೆಸುತ್ತಿದ್ದು, ಮಕ್ಕಳ ಕೈಯಲ್ಲೇ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ ಎಂದರು.

ಜಯನಗರ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಆಗಸ್ಟ್ 31ರಂದು ಬೆಳಗ್ಗೆ 10 ಗಂಟೆಗೆ 5 ಸಾವಿರ ಗಣೇಶಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 93413 89999 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News