ಸಂವಿಧಾನ ಬದ್ಧ ಹಕ್ಕುಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ: ಯೂಸುಫ್ ಎಚ್.ಮುಚಾಲ

Update: 2019-08-24 13:43 GMT

ಬೆಂಗಳೂರು, ಆ.24: ನಮ್ಮ ದೇಶ ಇವತ್ತು ಸಾಗುತ್ತಿರುವ ಹಾದಿ ನೋಡಿದರೆ ಎಲ್ಲೆಡೆಯೂ ಆತಂಕದ ವಾತಾವರಣ ಕಂಡು ಬರುತ್ತದೆ. ನಮ್ಮ ಸಂವಿಧಾನ ಬದ್ಧ ಹಾಗೂ ಮಾನವೀಯ ಹಕ್ಕುಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ ಎಂದು ಮುಂಬೈ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಎಪಿಸಿಆರ್ ರಾಷ್ಟ್ರೀಯ ಅಧ್ಯಕ್ಷ ಯೂಸುಫ್ ಹಾತಿಮ್ ಮುಚಾಲ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ಬೆನ್ಸನ್‌ಟೌನ್‌ನಲ್ಲಿರುವ ಇಂಡಿಯನ್ ಸೋಷಿಯಲ್ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದ ಅಸೋಸಿಯೇಷನ್ ಫಾರ್ ದಿ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಸಮಾಜದಲ್ಲಿರುವ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ನೊಂದವರಿಗೆ ಯಾವ ರೀತಿಯಲ್ಲಿ ಕಾನೂನು ಮೂಲಕ ನಾವು ನೆರವು ಕೊಡಲು ಸಾಧ್ಯ. ಸಂಘಟನೆಯ ಕಾರ್ಯವೈಖರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎಂಬುದನ್ನು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.

ನ್ಯಾಯಪರವಾಗಿರುವ ಎಲ್ಲರನ್ನೂ ಈ ಚಳವಳಿಯ ಭಾಗವನ್ನಾಗಿಸಲು ನಾವು ಬಯಸುತ್ತೇವೆ. ಕಾನೂನಿನ ನೆರವು ಅನ್ನೋದು ಕೇವಲ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆ, ಪ್ರಕರಣಗಳಿಗೆ ಸೀಮಿತಗೊಳಿಸುವುದು ನಮ್ಮ ಉದ್ದೇಶವಲ್ಲ. ಜನಸಾಮಾನ್ಯರು ನ್ಯಾಯಾಲಯಗಳ ಮೊರೆ ಹೋಗುವ ಪರಿಸ್ಥಿತಿಯೇ ನಿರ್ಮಾಣವಾಗಬಾರದು. ಆ ರೀತಿಯಲ್ಲಿ ಅವರ ಹಕ್ಕುಗಳ ಬಗ್ಗೆ ಅವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಯೂಸುಫ್ ಮುಚಾಲ ತಿಳಿಸಿದರು.

ಕಾಶ್ಮೀರದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ವಾಸ್ತವ ಪರಿಸ್ಥಿತಿಯನ್ನು ಮರೆಮಾಚಿ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂಬ ಅನುಮಾನವಿದೆ. ಆದುದರಿಂದ, ಯಾವುದನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ನಮ್ಮ ಸಂಘಟನೆಯು ರಾಷ್ಟ್ರೀಯ ಮಟ್ಟದ್ದಾಗಿದೆ. ಈವರೆಗೆ ನಾವು ಕಾಶ್ಮೀರದಲ್ಲಿ ನಮ್ಮ ವಿಭಾಗವನ್ನು ತೆರೆದಿಲ್ಲ. ಆದರೆ, ಅಲ್ಲಿನ ಜನರು ನಮ್ಮ ನೆರವು ಬಯಸಿದರೆ ಖಂಡಿತ ನಾವು ಕೊಡಲು ಸಿದ್ಧವಿದ್ದೇವೆ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ಎನ್‌ಸಿಆರ್(ನ್ಯಾಷನಲ್ ಸಿಟಿಜನ್‌ಶಿಪ್ ರಿಜಿಸ್ಟರ್) ಸಿದ್ಧಪಡಿಸುತ್ತಿದ್ದ ಸಂದರ್ಭದಲ್ಲಿ ಎಪಿಸಿಆರ್‌ನ 300 ಮಂದಿ ಸ್ವಯಂ ಸೇವಕರು, ಜಮಾತೆ ಇಸ್ಲಾಮಿ ಸಂಘಟನೆಯ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಸುಮಾರು 1.50 ಲಕ್ಷ ಅರ್ಜಿಗಳನ್ನು ಭರ್ತಿ ಮಾಡಿ, ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿದರು ಎಂದು ಯೂಸುಫ್ ಮುಚಾಲ ತಿಳಿಸಿದರು.

ದೇಶದ 22 ರಾಜ್ಯಗಳಲ್ಲಿ ನಮ್ಮ ವಿಭಾಗಗಳಿವೆ. ನಮ್ಮ ಅಗತ್ಯವಿರುವೆಡೆ ನಾವು ಹೋಗಿ ಕೆಲಸ ಮಾಡುತ್ತೇವೆ. ಅದೇ ರೀತಿ ಯುಎಪಿಎ ಕಾಯ್ದೆಯಲ್ಲಿ ಸೆಕ್ಷನ್ 35ಗೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲು ಮಾಡಿದ್ದೇವೆ ಎಂದು ಅವರು ಹೇಳಿದರು.

ನಮ್ಮ ಹೋರಾಟ ನಿರಂತರವಾಗಿರುತ್ತದೆ. ನ್ಯಾಯಾಲಯದಲ್ಲಿ ಕೆಲವೊಮ್ಮೆ ತೀರ್ಪು ಬರಲು ವಿಳಂಬವಾಗುತ್ತದೆ. ತೀರ್ಪು ನಮ್ಮ ವಿರುದ್ಧ ಬಂದರೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ನಾವು ಸ್ವಾತಂತ್ರ ಪಡೆಯಲು ಹೋರಾಟ ಮಾಡಿದ್ದೇವೆ. ಅದೇ ರೀತಿ ಸಿಕ್ಕಿರುವ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡಿದ್ದೇವೆ ಹಾಗೂ ಹೋರಾಡುತ್ತಿರುತ್ತೇವೆ ಎಂದು ಯೂಸುಫ್ ಮುಚಾಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಪಿಸಿಆರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಟಿ.ಆರಿಫ್ ಅಲಿ, ಜಂಟಿ ಕಾರ್ಯದರ್ಶಿ ರಫೀಕ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News