ದೇಶಕ್ಕೆ ಆರೆಸೆಸ್ಸ್ ಕೊಡುಗೆ ಏನು?: ಬಿ.ಎಲ್.ಸಂತೋಷ್ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

Update: 2019-08-24 14:27 GMT

ಬೆಂಗಳೂರು, ಆ.24: ಜಮ್ಮು-ಕಾಶ್ಮೀರದ ವಿಚಾರದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ಮಾಡಿದ ಯಡವಟ್ಟನ್ನು ನಾವು ಸರಿಪಡಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ದೇಶಕ್ಕೆ ಆರೆಸೆಸ್ಸ್ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಹರ್‌ಲಾಲ್ ನೆಹರು ಕೊಡುಗೆಗಳ ಬಗ್ಗೆ ಮಾತನಾಡುವುದಕ್ಕೆ ಸಂತೋಷ್‌ಗೆ ಏನು ಗೊತ್ತು. ಮೊದಲು ಈ ದೇಶಕ್ಕೆ ಆರೆಸೆಸ್ಸ್‌ನವರ ಕೊಡುಗೆ ಏನು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ನೆಹರು ಬಗ್ಗೆ ಮಾತನಾಡುವುದಕ್ಕೆ ಸಂತೋಷ್‌ಗೆ ಅಧಿಕಾರವಿಲ್ಲ. ಬಿಜೆಪಿ ಹಾಗೂ ಆರೆಸೆಸ್ಸ್‌ನವರು ದೇಶದ ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದಾರೆ. ಈ ದೇಶಕ್ಕೆ ನೆಹರು ಕೊಟ್ಟಿರುವ ಕೊಡುಗೆಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಏನೇನು ಆಗುತ್ತದೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಸರಕಾರದ ವಿರುದ್ಧ ವಾಗ್ದಾಳಿ: ಸಚಿವ ಸಂಪುಟ ರಚನೆಗೆ ಮುಖ್ಯಮಂತ್ರಿ ಅಷ್ಟೊಂದು ಸಮಯ ತೆಗೆದುಕೊಂಡರು. ಈಗ ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ತೀರ್ಮಾನವಾಗುತ್ತಿಲ್ಲ. ಅದಕ್ಕೂ ಹೊಸದಿಲ್ಲಿಗೆ ಹೋಗಿ ಬರುವುದೇ ಆಗಿದೆ. ಸರಕಾರದ ಮಟ್ಟದಲ್ಲಿ ಎಲ್ಲ ಕೆಲಸ ಕಾರ್ಯಗಳು ಸ್ಥಗಿತವಾಗಿವೆ ಎಂದು ಅವರು ಆರೋಪಿಸಿದರು.

ನಮ್ಮ ಸರಕಾರವನ್ನು ಟೇಕಾಫ್ ಆಗಿಲ್ಲ ಎಂದು ಬಿಜೆಪಿಯವರು ಆರೋಪಿಸುತ್ತಿದ್ದರು. ಇವರ ಸರಕಾರದ್ದು ಇನ್ನು ಇಂಜಿನ್ ಆನ್ ಆಗುವುದಿರಲಿ, ಇಗ್ನೀಷಿಯನ್ ಕೂಡ ಚಾಲನೆಯಾಗಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಎಂದು ದಿನೇಶ್ ಗುಂಡೂರಾವ್ ಟೀಕಾ ಪ್ರಹಾರ ನಡೆಸಿದರು.

ಕೆಪಿಸಿಸಿಗೆ ಶೀಘ್ರವೇ ಪದಾಧಿಕಾರಿಗಳ ನೇಮಕ: ಎಐಸಿಸಿಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಈಗ ಚುರುಕಾಗಿ ಎಲ್ಲ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೆ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಈಗಾಗಲೇ 10 ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಹೊಸದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ಮುಂದುವರೆದಿದೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ದೇಶದ ಅಭಿವೃದ್ಧಿ ಬಗ್ಗೆ ಸಂತೋಷ್ ಮಾತನಾಡಲ್ಲ. ನೆಹರು ಈ ದೇಶಕ್ಕೆ ನೀಡಿರುವ ಕೊಡುಗೆ ಬಗ್ಗೆ ಅವರಿಗೆ ಗೊತ್ತಿದೆಯೇ? ಇತಿಹಾಸ ಗೊತ್ತಿಲ್ಲದವರು ಏನು ಬೇಕಾದರೂ ಮಾತನಾಡಬಹುದು. ಸಂತೋಷ್‌ಗೆ ಇತಿಹಾಸ ಗೊತ್ತಿಲ್ಲ. ಅದಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ನೆಹರು ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಅವರಿಂದಾಗಿ ಕಾಶ್ಮೀರ ನಮ್ಮ ದೇಶದಲ್ಲೆ ಉಳಿದಿದೆ.

-ಕೃಷ್ಣ ಭೈರೇಗೌಡ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News