ಇಸ್ರೇಲ್‌ನಿಂದ ದಕ್ಷಿಣ ಬೈರುತ್ ಮೇಲೆ ಡ್ರೋನ್ ದಾಳಿ: ಲೆಬನನ್ ಸೇನೆ

Update: 2019-08-25 17:04 GMT

ಬೈರುತ್, ಆ.25: ದಕ್ಷಿಣ ಬೈರುತ್‌ನ ಹಿಜ್ಬುಲ್ಲಾ ಅಧಿಪತ್ಯದ ಪ್ರದೇಶಕ್ಕೆ ರವಿವಾರ ಅಪ್ಪಳಿಸಿರುವ ಎರಡು ಡ್ರೋನ್‌ಗಳು ಇಸ್ರೇಲ್‌ಗೆ ಸೇರಿವೆ ಎಂದು ಲೆಬನನ್ ಸೇನೆ ತಿಳಿಸಿದೆ. ಈ ದಾಳಿಯಲ್ಲಿ ಮಾಧ್ಯಮ ಕೇಂದ್ರಕ್ಕೆ ಹಾನಿಯಾಗಿದೆ ಎಂದು ಶಿಯಾ ಗುಂಪು ತಿಳಿಸಿದೆ.

ಇಸ್ರೇಲ್‌ಗೆ ಸೇರಿದ ಎರಡು ಡ್ರೋನ್‌ಗಳು ಲೆಬನೀಸ್ ವಾಯುಮಾರ್ಗವನ್ನು ಉಲ್ಲಂಘಿಸಿ ಬೈರುತ್‌ನ ದಕ್ಷಿಣ ಉಪನಗರದ ಮೇಲೆ ಬಿದ್ದಿವೆ. ಮೊದಲನೆಯ ಡ್ರೋನ್ ಬಿದ್ದರೆ ಎರಡನೆಯದ್ದು ಗಾಳಿಯಲ್ಲೇ ಸ್ಫೋಟಗೊಂಡಿದೆ ಇದರಿಂದಾಗಿ ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಿರಿಯ ಮೇಲೆ ಇಸ್ರೇಲ್ ವಾಯುದಾಳಿ ಆರಂಭಿಸಿದ ಗಂಟೆಗಳ ನಂತರ ಈ ಘಟನೆ ನಡೆದಿದೆ.

ಸದ್ಯ ಬೈರುತ್ ವಾಯುಮಾರ್ಗ ಮುಚ್ಚಲಾಗಿದ್ದು ಸೇನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈರುತ್‌ಗೆ ಅಪ್ಪಳಿಸಿದ ಎರಡು ಡ್ರೋನ್‌ಗಳ ಪೈಕಿ ಒಂದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ಹಿಜ್ಬುಲ್ಲಾ ವಕ್ತಾರ ಮುಹಮ್ಮದ್ ಆಫಿಫ್ ತಿಳಿಸಿದ್ದಾರೆ. ಇರಾನ್ ಬೆಂಬಲ ಹೊಂದಿರುವ ಹಿಜ್ಬುಲ್ಲಾವನ್ನು ಇಸ್ರೇಲ್ ಮತ್ತು ಅಮೆರಿಕ ಉಗ್ರ ಸಂಘಟನೆ ಎಂದು ಪರಿಗಣಿಸಿದೆ. 2006ರಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಮಧ್ಯೆ 33 ದಿನಗಳ ಕಾಲ ನಡೆದ ಯುದ್ಧದಲ್ಲಿ ಲೆಬನನ್‌ನಲ್ಲಿ 1,200 ಮಂದಿ ಮತ್ತು ಇಸ್ರೇಲ್‌ನಲ್ಲಿ 160 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News