ಬುಮ್ರಾ ಮ್ಯಾಜಿಕ್: ಭಾರತಕ್ಕೆ ಭಾರೀ ಜಯ

Update: 2019-08-26 03:42 GMT

ಆ್ಯಂಟಿಗುವಾ: ಜಸ್‌ಪ್ರೀತ್ ಬುಮ್ರಾ ಕೇವಲ 7 ರನ್‌ಗಳಿಗೆ 5 ವಿಕೆಟ್ ಕಬಳಿಸುವ ಮೂಲಕ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ 318 ರನ್‌ಗಳ ಭಾರೀ ಅಂತರದ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

419 ರನ್‌ಗಳ ಗೆಲುವಿನ ಗುರಿ ಪಡೆದ ಅತಿಥೇಯ ತಂಡ ಕೇವಲ 26.5 ಓವರ್‌ಗಳಲ್ಲಿ 100 ರನ್‌ಗಳಿಗೆ ಪತನಗೊಂಡು, ನಾಲ್ಕನೇ ದಿನದ ಕೊನೆಗೇ ಸೋಲೊಪ್ಪಿಕೊಂಡಿತು.

ಕೇವಲ ಎಂಟು ಓವರ್ ಬೌಲಿಂಗ್ ಮಾಡಿದ ಬುಮ್ರಾ ಏಳು ರನ್ ನೀಡಿ ಐದು ವಿಕೆಟ್ ಪಡೆದರು. 11ನೇ ಟೆಸ್ಟ್‌ನಲ್ಲೇ 50 ವಿಕೆಟ್ ಪಡೆದ ಬೂಮ್ರಾ, ಅತಿವೇಗವಾಗಿ ಈ ಮೈಲುಗಲ್ಲು ತಲುಪಿದ ಭಾರತೀಯ ಆಟಗಾರ ಎನಿಸಿಕೊಂಡರು.

ಬುಮ್ರಾಗೆ ಉತ್ತಮ ಸಾಥ್ ನೀಡಿದ ಇಶಾಂತ್ ಶರ್ಮಾ (3/31) ಮತ್ತು ಮೊಹ್ಮದ್ ಶಮಿ (2/13) ವೆಸ್ಟ್‌ಇಂಡೀಸ್ ತಂಡದ ಬೆನ್ನೆಲುಬು ಮುರಿದರು. ಕೆಮರ್ ರೂಚ್ (38), ಮಿಗುಲ್ ಕಮಿನ್ಸ್ (ನಾಟೌಟ್ 19) ಮತ್ತು ರೋಸ್ಟನ್ ಚೇಸ್ (12) ಮಾತ್ರ ಎರಡಂಕಿ ತಲುಪಿದ ವಿಂಡೀಸ್ ಬ್ಯಾಟ್ಸ್‌ಮನ್‌ಗಳು. ಕೊನೆಯ ವಿಕೆಟ್‌ಗೆ ಕಮಿನ್ಸ್ ಜತೆ ಸೇರಿ ರೋಚ್ 50 ರನ್ ಸೇರಿಸಿ, ಗೆಲುವಿನ ಔಪಚಾರಿಕತೆಯನ್ನು ಸ್ವಲ್ಪಕಾಲ ಮುಂದೂಡಿದರು.

ಇದು ಭಾರತದ ನಾಲ್ಕನೇ ಅತಿದೊಡ್ಡ ಅಂತರದ ಟೆಸ್ಟ್ ಗೆಲುವು ಎನಿಸಿದೆ. 2015-16ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿಯಲ್ಲಿ ಸಾಧಿಸಿದ 337ರನ್‌ಗಳ ಗೆಲುವು ಅತಿದೊಡ್ಡ ಗೆಲವು ಎನಿಸಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 27ನೇ ಟೆಸ್ಟ್ ಗೆಲುವು ಸಾಧಿಸಿದ್ದು, ಗರಿಷ್ಠ ಗೆಲುವು ತಂದುಕೊಟ್ಟ ನಾಯಕ ಎಂಬ ದಾಖಲೆಯನ್ನು ಎಂ.ಎಸ್.ಧೋನಿ ಜತೆ ಹಂಚಿಕೊಂಡರು. ಜತೆಗೆ ವಿದೇಶಿ ನೆಲದಲ್ಲಿ ಗರಿಷ್ಠ ಗೆಲುವು ಸಾಧಿಸಿದ ಗಂಗೂಲಿ (11) ಅವರ ದಾಖಲೆಯನ್ನೂ ಕೊಹ್ಲಿ ಸರಿಗಟ್ಟಿದರು.

ಇದಕ್ಕೂ ಮುನ್ನ ಯುವ ಬ್ಯಾಟ್ಸ್‌ಮನ್ ಹನುಮ ವಿಹಾರಿ (93) ಜತೆ ಸೇರಿ ದೊಡ್ಡ ಇನಿಂಗ್ಸ್ ಕಟ್ಟಿದ ರಹಾನೆ (102) ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದಾಗ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News