ಸುವರ್ಣ ಯುಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೇನೆ: ನಳಿನ್‌ ಕುಮಾರ್ ಕಟೀಲ್

Update: 2019-08-27 14:32 GMT

ಬೆಂಗಳೂರು, ಆ.27: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಸುವರ್ಣಯುಗದಲ್ಲಿ ವರಿಷ್ಠರು ನನ್ನನ್ನು ರಾಜ್ಯಧ್ಯಕ್ಷರನ್ನಾಗಿ ನೇಮಿಸಿರುವುದು ಜವಾಬ್ದಾರಿ ಹೆಚ್ಚಿಸಿದೆ ಎಂದು ನೂತನ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿ ಮುಂಭಾಗ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನೊಬ್ಬ ಆರೆಸ್ಸೆಸ್‌ನ ನಿಷ್ಠಾವಂತ ಕಾರ್ಯಕರ್ತ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ನನ್ನನ್ನು ಗುರುತಿಸಿ ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಇದಕ್ಕಾಗಿ ನಾನು ಆರೆಸ್ಸೆಸ್‌ಗೆ ಸದಾ ಋಣಿಯಾಗಿರುತ್ತೇನೆ ಎಂದು ಹೇಳಿದರು.

ಬಿಜೆಪಿಯಲ್ಲಿ ಮಾತ್ರ ಒಬ್ಬ ಸಾಮಾನ್ಯ ಕಾರ್ಯಕರ್ತ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನಾನೇ ನಿದರ್ಶನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ನನ್ನನ್ನು ಗುರುತಿಸಿ ಲೋಕಸಭೆಗೆ ಪಕ್ಷದವರು ಟಿಕೆಟ್ ನೀಡಿದರು. ಮೂರು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಇಷ್ಟು ದೊಡ್ಡ ಹುದ್ದೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಇದೀಗ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಯಡಿಯೂರಪ್ಪನವರ ಮಾರ್ಗದರ್ಶ, ಸಂಘ ಪರಿವಾರದ ನಾಯಕರ ಸಲಹೆ ಪಡೆದು ಪಕ್ಷವನ್ನು ಇನ್ನಷ್ಟು ಪ್ರಬಲವಾಗಿ ಸಂಘಟಿಸುವುದು ನನ್ನ ಮುಂದಿನ ಗುರಿ. ಮಾತನಾಡಲು ಬಾರದ ನನಗೆ ಮಾತು ಕಲಿಸಿದ್ದು ಆರೆಸ್ಸೆಸ್. ಅವರ ಸಲಹೆಯಂತೆ ಪಕ್ಷವನ್ನು ಸಂಘಟಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲೆಲ್ಲಿ ಪಕ್ಷ ಸಂಘಟನೆ ಕೊರತೆ ಇದೆಯೇ ಅಂತಹ ಕಡೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇಲ್ಲಿ ನಾಯಕರು ಮತ್ತು ಕಾರ್ಯಕರ್ತರ ನಡುವೆ ವ್ಯತ್ಯಾಸವಿಲ್ಲದಂತೆ ಪಕ್ಷ ಸಂಘಟಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಅವರು ಹೇಳಿದರು.

ಬೆಂಕಿ ಕಟೀಲ್, ಬೆಂಕಿ ಸಂತೋಷ್ ಮುನ್ನೆಲೆಗೆ ಬರುತ್ತಲೇ ಬಿಜೆಪಿಯೇ ಧಗಧಗಿಸುತ್ತಿದೆ. ಸ್ವತಃ ಬಿಜೆಪಿಯ ಕಾರ್ಯಕರ್ತರೇ ರಾಜ್ಯ ಆರೆಸೆಸ್ಸ್ ನಾಯಕ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಸ್ವಯಂ ಘೋಷಿತ ಚಾಣಾಕ್ಯನ ಭಾವಚಿತ್ರ, ಪ್ರತಿಕೃತಿಗೆ ಬೆಂಕಿ ಇಟ್ಟು ಧಿಕ್ಕಾರ ಕೂಗುತ್ತಿದ್ದಾರೆ. ಮರದೊಳಗಣ ಕಿಚ್ಚು, ಮರವನ್ನೇ ಸುಡುತ್ತಿದೆ ಎಂದು ಕಾಂಗ್ರೆಸ್ ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News