"ಕೊಳಲು ಊದಿದರೆ ದನ ಹೆಚ್ಚು ಹಾಲು ನೀಡುತ್ತದೆ": ಬಿಜೆಪಿ ಶಾಸಕನ ಹೊಸ ಸಂಶೋಧನೆ!

Update: 2019-08-27 10:28 GMT

ಗುವಹಾಟಿ, ಆ.27: “ಶ್ರೀ ಕೃಷ್ಣ ಮಾಡಿದಂತೆ ಕೊಳಲನ್ನು ವಿಶಿಷ್ಟ ರಾಗದಲ್ಲಿ ಊದಲು ನಮಗೆ ಸಾಧ್ಯವಾದರೆ ದನ ನೀಡುವ ಹಾಲು ಹಲವು ಪಟ್ಟು ಹೆಚ್ಚಾಗುವುದು ಎಂದು ಆಧುನಿಕ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ'' ಎಂದು ಅಸ್ಸಾಂ ಬಿಜೆಪಿ ನಾಯಕ ಹಾಗೂ ಶಾಸಕ ದಿಲೀಪ್ ಕುಮಾರ್ ಪೌಲ್  ಹೇಳಿದ್ದಾರೆ.

ಸಿಲ್ಚಾರ್ ಕ್ಷೇತ್ರದ ಶಾಸಕರಾಗಿರುವ ಪೌಲ್  ತಮ್ಮ ಕ್ಷೇತ್ರದಲ್ಲಿ ರವಿವಾರ ನಡೆದ ಜಾನಪದ ಉತ್ಸವದಲ್ಲಿ ಮೇಲಿನಂತೆ ಹೇಳಿದ್ದಾರೆ. “ಇದು ಪ್ರಾಚೀನ ಕಾಲದ ವಿಜ್ಞಾನ ಹಾಗೂ ನಾವು ಈ ತಂತ್ರಗಾರಿಕೆಯನ್ನು ಆಧುನಿಕ ಕಾಲದಲ್ಲಿ  ಪರಿಚಯಿಸಲಿದ್ದೇವೆ'' ಎಂದೂ ಅವರು ಹೇಳಿಕೊಂಡರು.

"ನಾನು ವಿಜ್ಞಾನಿಯಲ್ಲ, ಆದರೆ ಭಾರತದ ಸಾಂಪ್ರದಾಯಿಕತೆಯ ಬಗ್ಗೆ ನನಗೆ ಸಾಕಷ್ಟು ಜ್ಞಾನವಿದೆ ಹಾಗೂ ಈ ಮಾತುಗಳು ನಿಜ ಹಾಗೂ ಇಂತಹ ವಿಚಾರಗಳನ್ನು ವಿಜ್ಞಾನಿಗಳು ಇತ್ತೀಚೆಗೆ ನಂಬಲು ಆರಂಭಿಸಿದ್ದಾರೆ'' ಎಂದರು.

ಕಳೆದ ವರ್ಷ ದಿಲ್ಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವ ವೇಳೆ ಪುರುಷ ಬೆಂಬಲಿಗನ ಹೆಗಲಿನಲ್ಲಿ ಕುಳಿತ ಆಗಿನ ಸಿಲ್ಚಾರ್ ಸಂಸದೆ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಅವರನ್ನು ‘ಕಲಂಕ್ ಆಫ್ ಸಿಲ್ಚಾರ್' ಎಂದು ಬಣ್ಣಿಸಿ ``50 ವರ್ಷದ ಅವಿವಾಹಿತ ಮಹಿಳೆ'' ಎಂದು ಅಣಕವಾಡಿ ಪೌಲ್ ವಿವಾದಕ್ಕೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News