ಪ್ರಜಾಪ್ರಭುತ್ವದ ಕತ್ತು ಹಿಸುಕುವುದನ್ನು ನಿಲ್ಲಿಸಿ: ಪಾಪ್ಯುಲರ್ ಫ್ರಂಟ್

Update: 2019-08-28 05:47 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಮತ್ತು ದಬ್ಬಾಳಿಕೆಯ ಮಾರ್ಗವು ದೇಶ ಎದುರಿಸುತ್ತಿರುವ ಆರ್ಥಿಕ ಕುಸಿತ ಸೇರಿದಂತೆ ಇತರ ಗಂಭೀರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶವನ್ನು ಹೊಂದಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ ಅಭಿಪ್ರಾಯಪಟ್ಟಿದೆ.

ಭಾರತೀಯ ಆರ್ಥಿಕತೆಯು ಅಭೂತಪೂರ್ವ ಕುಸಿತವನ್ನು ಎದುರಿಸುತ್ತಿದೆ ಎಂದು ಬಹುತೇಕ ಎಲ್ಲಾ ಆರ್ಥಿಕ ಸೂಚಕಗಳು ತೋರಿಸುತ್ತಿವೆ. ಈ ಪರಿಸ್ಥಿತಿಯು ಮೊದಲ ಮೋದಿ ಸರ್ಕಾರದ ಡಿಮೋನಿಟೈಸೇಶನ್ ಮತ್ತು ಜಿಎಸ್ಟಿಯ ಅವಿವೇಕದ ಕ್ರಮಗಳ ನೇರ ಪರಿಣಾಮವಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಂಬರುವ ತಿಂಗಳುಗಳಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ, ಹಲವಾರು ಕಂಪನಿಗಳು ಮುಚ್ಚಲ್ಪಡಲಿವೆ ಅಥವಾ ಸ್ಥಗಿತಗೊಳ್ಳಬಹುದು ಎಂದು ಅರ್ಥಶಾಸ್ತ್ರಜ್ಞರು ಸೂಚಿಸುತ್ತಾರೆ. ಇಂತಹ ಪರಿಸ್ಥಿತಿಯನ್ನು ಗುರುತಿಸಿ ಅದನ್ನು ಸಮಗ್ರತೆಯಿಂದ ಎದುರಿಸುವ ಬದಲು, ಕೇಂದ್ರ ಸರ್ಕಾರವು ಹಿಂದೆಂದೂ ಪ್ರಯೋಗಿಸಲ್ಪಡದ ದಬ್ಬಾಳಿಕೆಯ ಆಡಳಿತ ವೈಖರಿಯನ್ನು ಪ್ರಯೋಗಿಸುತ್ತಿದೆ. ವಿವಾದಾತ್ಮಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಅದರ ವಿರುದ್ಧ ಎದ್ದಿರುವ ಕಳವಳಗಳನ್ನು ಪರಿಗಣಿಸದೆ ಅದನ್ನು ಹೆಚ್ಚು ಕಠಿಣವಾಗಿಸುತ್ತಿದೆ. ಧ್ರುವೀಕರಿಸಿದ ಜನಸಂಖ್ಯೆಯ ಭಾವನೆಗಳನ್ನು ಸಮಾಧಾನಪಡಿಸಲು ಸಂಸದೀಯ ಪರಿಶೀಲನೆ ಇಲ್ಲದೆ ಬಲಪಂಥೀಯ ಮಸೂದೆಗಳನ್ನು ಅವಸರದಲ್ಲಿ ಅಂಗೀಕರಿಸಲಾಯಿತು. ವಿರೋಧ ಪಕ್ಷದ ಉನ್ನತ ವ್ಯಕ್ತಿಗಳನ್ನು ಗುರಿಯಾಗಿಸಲು ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ಬೆದರಿಸಲು ಅಧಿಕಾರವನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಈ ಸಂದರ್ಭ ಹೇಳಲಾಯಿತು.

ಕಾಶ್ಮೀರದಲ್ಲಿ ಅಮಾನವೀಯ ನಿಬಂಧನೆಯನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು ಸಭೆಯು ಸರ್ಕಾರವನ್ನು ಕೋರಿದೆ. ಇದು ಜನರ ಜೀವನದ ಮೇಲೆ ದುರಂತ ಪರಿಣಾಮ ಬೀರುತ್ತಿದೆ ಎಂಬ ವರದಿಗಳು ಹೊರಬರುತ್ತಿವೆ. ವರದಿಗಳ ಪ್ರಕಾರ ಸಂವಹನ ಮತ್ತು ಸಾರಿಗೆಯ ಮೇಲಿನ ನಿರ್ಬಂಧವು ಜನರು ಔಷಧಿಗಳನ್ನು ಒಳಗೊಂಡಂತೆ ಮೂಲಭೂತ ಅವಶ್ಯಕತೆಗಳಿಂದ ಹೊರಗುಳಿಯುವಂತೆ ಮಾಡಿದೆ. ರಾಜ್ಯದ ನೈಜ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಮಾಧ್ಯಮಗಳಿಗೆ ಅವಕಾಶವಿಲ್ಲದಿದ್ದರೂ,  ಕಾಶ್ಮೀರದಲ್ಲಿ ಸರಕಾರವು ಜನರನ್ನು ಬಂಧಿಸಿ ಹಿಂಸೆ ನೀಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಕಾಶ್ಮೀರಕ್ಕೆ ಮಾತ್ರವಲ್ಲದೆ ಭಾರತದ ಉಳಿದ ಭಾಗಗಳಿಗೂ ಬಹಳ ಆತಂಕಕಾರಿ ಪರಿಸ್ಥಿತಿ. ಇಡೀ ದೇಶಕ್ಕೆ ಅವರ ಮಾಹಿತಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ ಮತ್ತು ಸರ್ಕಾರದ 'ಅಧಿಕೃತ ಆವೃತಿ' ಕಥೆಯನ್ನು ಮಾತ್ರ ನಂಬುವಂತೆ ಒತ್ತಾಯಿಸಲಾಗುತ್ತದೆ. ಎಲ್ಲವೂ ಸಾಮಾನ್ಯ ಎಂದು ಸರ್ಕಾರ ಹೇಳಿಕೊಂಡರೂ, ರಾಷ್ಟ್ರೀಯ ಪಕ್ಷಗಳ ಉನ್ನತ ನಾಯಕರನ್ನು ಸಹ ಶ್ರೀನಗರದಿಂದ ಅಲ್ಲಿಗೆ ಇಳಿಸಲು ಅಥವಾ ಜನರನ್ನು ಭೇಟಿ ಮಾಡಲು ಅನುಮತಿಸದೆ ವಾಪಸ್ ಕಳುಹಿಸಲಾಗುತ್ತದೆ. ಈ ಅಮಾನವೀಯ ನಡೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು ಕಾಶ್ಮೀರದ ಹೆಸರಿನಲ್ಲಿ ರಾಜ್ಯದ ಜನರಿಗೆ ಮತ್ತು ರಾಷ್ಟ್ರಕ್ಕೆ ನಿರಾಕರಿಸಲ್ಪಟ್ಟ ಪ್ರಜಾಪ್ರಭುತ್ವ ಹಾಗೂ ನಾಗರಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ಪಾಪ್ಯುಲರ್ ಫ್ರಂಟ್‌ನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಒತ್ತಾಯಿಸಿತು.

ಕೇಂದ್ರ ಸರ್ಕಾರವು ಈ ರೀತಿಯಾಗಿ ಸರ್ವಾಧಿಕಾರತ್ವದ  ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದರೂ, ಅದನ್ನು ಬಹಿರಂಗಪಡಿಸುವಲ್ಲಿ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಪಕ್ಷಗಳು ಶೋಚನೀಯವಾಗಿ ವಿಫಲವಾಗಿದೆ. ಪ್ರಸ್ತುತ ಪರಿಸ್ಥಿತಿಯು ಸರ್ಕಾರದ ಕ್ರೂರ ಆಡಳಿತದಿಂದ ಭಯಭೀತರಾಗದೆ ಅಥವಾ ಸಣ್ಣ ರಾಜಕೀಯ ಲಾಭಗಳಿಂದ ಪ್ರಲೋಭನೆಗೆ ಒಳಗಾಗದೆ, ನಮ್ಮ ಜನರಿಗೆ ಮತ್ತು ರಾಷ್ಟ್ರದ ಜಾತ್ಯತೀತ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿರುವಂತಹ ಹೊಸ 'ಜನರ ಆಂದೋಲನ'ವನ್ನು ಬಯಸುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿತು. 

ಅಧ್ಯಕ್ಷ ಇ.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ, ಉಪಾಧ್ಯಕ್ಷ ಒಎಂಎ ಸಲಾಮ್, ಕಾರ್ಯದರ್ಶಿಗಳಾದ ಅನೀಸ್ ಅಹ್ಮದ್, ಅಬ್ದುಲ್ ವಾಹಿದ್ ಸೇಟ್ ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಇ.ಎಂ.ಅಬ್ದುಲ್ ರಹ್ಮಾನ್, ಪ್ರೊ.ಪಿ.ಕೋಯಾ, ಕೆ.ಎಂ.ಶರೀಫ್, ಅಡ್ವಕೇಟ್ ಎ. ಮುಹಮ್ಮದ್ ಯೂಸುಫ್, ಎ ಎಸ್ ಇಸ್ಮಾಯಿಲ್, ಮುಹಮ್ಮದ್ ರೋಷನ್, ಮುಹಮ್ಮದ್ ಇಸ್ಮಾಯಿಲ್, ನಸ್ರುದ್ದೀನ್ ಎಲಮರಮ್ ಮತ್ತು ಕರಮನ ಅಶ್ರಫ್ ಮೌಲವಿ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News