ನೆರೆ ಪರಿಹಾರ: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ- ಸಚಿವ ಆರ್.ಅಶೋಕ್

Update: 2019-08-28 13:14 GMT

ಬೆಂಗಳೂರು, ಆ. 28: ನೆರೆ ಸಂತ್ರಸ್ತರ ನೀಡುವ ಪರಿಹಾರವನ್ನು ದುರ್ಬಳಕೆ ಮಾಡಿಕೊಳ್ಳುವ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈ ಬಗ್ಗೆ ಆರೋಪಗಳ ಬಗ್ಗೆ ತನಿಖೆಗೆ ತಂಡ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಹೆಸರಿನಲ್ಲಿ ಕೆಲವರು ಪರಿಹಾರದ ಹಣವನ್ನು ಲೂಟಿ ಮಾಡುತ್ತಿರುವ ಬಗ್ಗೆ ಆರೋಪಗಳಿವೆ. ಹೀಗಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು ಎಂದರು.

ರಾಜ್ಯದಲ್ಲಿ ಉಂಟಾದ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ 32 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಈ ಬಗ್ಗೆ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಲಿದ್ದು, ಕೂಡಲೇ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ ಸಮರೋಪಾದಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು, ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಂಡಿದೆ. ಆದರೆ, ವಿಪಕ್ಷಗಳು ಸುಖಾ ಸುಮ್ಮನೆ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ತಿಳಿಸಿದರು.

ನನ್ನ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯಲ್ಲಿ ಸಚಿವರಾದ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಶಶಿಕಲಾ ಜೊಲ್ಲೆ ಇದ್ದಾರೆ ಎಂದ ಅವರು, ಕೇಂದ್ರ ಅಧ್ಯಯನ ತಂಡ ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News