ಬಿಬಿಎಂಪಿ ನೂತನ ಆಯುಕ್ತರಾಗಿ ಬಿ.ಎಚ್.ಅನಿಲ್ ಕುಮಾರ್ ಅಧಿಕಾರ ಸ್ವೀಕಾರ

Update: 2019-08-28 13:24 GMT

ಬೆಂಗಳೂರು, ಆ.28: ನಗರ ತಜ್ಞರ ಸಲಹೆ ಪಡೆದು ಬೆಂಗಳೂರು-2050 ಮುನ್ನೋಟ(ವಿಷನ್ ಡಾಕ್ಯುಮೆಂಟ್)ವನ್ನು ರಚಿಸಿ ಅದರಂತೆ ಯೋಜನೆಗಳ ಅನುಷ್ಠಾನ ಮಾಡಿ ಬೆಂಗಳೂರನ್ನು ಅಂತರ್‌ರಾಷ್ಟ್ರೀಯ ನಗರವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ನೂತನ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ. 

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತರಾಗಿ ವರ್ಗಾವಣೆಯಾದ ಬಳಿಕ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಬೆಳ್ಳಿ ಬ್ಯಾಟನ್ ನೀಡಿ ಮಂಜುನಾಥ್ ಪ್ರಸಾದ್ ತಮ್ಮ ಅಧಿಕಾರ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ನೂತನ ಆಯುಕ್ತ ಅನಿಲ್ ಕುಮಾರ್, ಸ್ವಚ್ಛ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ. ನಗರದ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನಗರತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ಆಡಳಿತ ನಿರ್ವಹಣೆ ಸಂಸ್ಥೆಗಳ ಸಲಹೆ ಪಡೆದು, ಪರಿಸರ, ನೀರು ಪೂರೈಕೆ, ಸಾರಿಗೆ ಹಾಗೂ ಕಸ ನಿರ್ವಹಣೆ ಕುರಿತ ಮುಂದಿನ ಇಪ್ಪತ್ತು ಮೂವತ್ತು ವರ್ಷಗಳ ಯೋಜನೆ ರೂಪಿಸಲಾಗುವುದು ಎಂದು ನುಡಿದರು.

ಇಂದಿರಾ ಕ್ಯಾಂಟೀನ್ ನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಕ್ಯಾಂಟೀನ್‌ಗೆ ಬೇಕಾದ ಶೇ.50 ರಷ್ಟಾದರೂ ಹಣ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಈಗಾಗಲೇ ಹಣಕಾಸು ಇಲಾಖೆಗೆ ಮನವಿ ಮಾಡಿದೆ. ಅಲ್ಲದೆ ಈಗಾಗಲೇ ಇಂದಿರಾ ಕ್ಯಾಂಟೀನ್, ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಕುರಿತು ತನಿಖೆಗೆ ಸಮಿತಿ ರಚನೆಯಾಗಿದೆ, ವರದಿಯಾಧರಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ ತ್ಯಾಜ್ಯ ನಿರ್ವಹಣೆ, ಕೆರೆಗಳ ಪುನಶ್ಚೇತನ, ನೀರು ಸರಬರಾಜು ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಿದರು.

ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ನೇತೃತ್ವದಲ್ಲಿ ಎಲ್ಲ ಸ್ಥಳೀಯ ಇಲಾಖೆಗಳ ಸಮನ್ವಯ ಸಮಿತಿ ಇದೆ. ಇದರ ಸಭೆಗಳ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಿಸಲಾಗುವುದು ಎಂದು ಅವರು ಹೇಳಿದರು.

ಜಾಹೀರಾತು ಬೈಲಾದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ನಗರದಲ್ಲಿ ಒಂದು ವರ್ಷ ನಿಷೇಧವಿದೆ. ಆದರೆ ಇದಕ್ಕೆ ಸಾಕಷ್ಟು ಜನರ ವಿರೋಧವೂ ಇದೆ. ಹೀಗಾಗಿ ಅಂತಿಮವಾಗಿ ಒಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನುವ ಮೂಲಕ ಜಾಹೀರಾತು ಅಳವಡಿಕೆಗೆ ಮತ್ತೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.

ನಿರ್ಗಮಿತ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅದಕ್ಕೆ ತಕ್ಕ ನಗರದ ಬೆಳವಣಿಗೆಯಾಗಬೇಕು. ಬಿಬಿಎಂಪಿಯಲ್ಲಿ ತಮ್ಮ ಮೂರು ವರ್ಷ, ನಾಲ್ಕು ತಿಂಗಳ ಕೆಲಸ ತೃಪ್ತಿ ತಂದಿದೆ. ಎರಡು ಚುನಾವಣೆ, ಹಣಕಾಸು ಸ್ಥಿತಿ ಅಭಿವೃದ್ಧಿ, ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ಹಾಗೂ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಾಡಿರುವ ಕೆಲಸಗಳು ತಮ್ಮ ಅವಧಿಯ ಸಾಧನೆಗಳು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News