ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಮಾಜಿ ಶಾಸಕರ ಆಗ್ರಹ

Update: 2019-08-28 13:25 GMT

ಬೆಂಗಳೂರು, ಆ.28: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರವು ಕೂಡಲೇ ಪರಿಹಾರ ನೀಡಬೇಕು. ಮಲತಾಯಿ ಧೋರಣೆ ಬಿಟ್ಟು ಹೆಚ್ಚಿನ ಅನುದಾನ ನೀಡಬೇಕು ಎಂದು ಮಾಜಿ ಶಾಸಕರ ವೇದಿಕೆ ಆಗ್ರಹಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಭೀಕರ ಪ್ರವಾಹ ಸಂಭವಿಸಿದೆ. ಸಾವಿರಾರು ಜನರು ಅತಂತ್ರರಾಗಿದ್ದಾರೆ. ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಇಂತಹ ಸಂದರ್ಭದಲ್ಲಿ ಸರಕಾರಗಳು ನಿರ್ಲಕ್ಷ್ಯ ಮಾಡದೇ ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೆರೆ ಸಂತ್ರಸ್ತ ಜಿಲ್ಲೆಗಳಿಗೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ಇದುವರೆಗೂ ನಯಾಪೈಸೆ ಬಿಡುಗಡೆ ಮಾಡಲು ಮುಂದಾಗಿಲ್ಲ. ಇದು ರಾಜ್ಯದ ಕುರಿತು ಕೇಂದ್ರ ಸರಕಾರದ ತಾರತಮ್ಯ ನೀತಿಯಾಗಿದೆ. ಇದು ಸರಿಯಾದ ಕ್ರಮವಲ್ಲ. ಕೇಂದ್ರ ಸರಕಾರ ಕೂಡಲೇ ಹಣ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಸದಸ್ಯರ ಸಭೆ ನಡೆದು ನೆರೆ ಸಂತ್ರಸ್ತರಿಗೆ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದೆ. 800 ಕ್ಕೂ ಹೆಚ್ಚು ಮಾಜಿ ಶಾಸಕರು ರಾಜ್ಯದಲ್ಲಿದ್ದು ಪ್ರತಿಯೊಬ್ಬರು ಕನಿಷ್ಠ 10 ಸಾವಿರದಷ್ಟು ಹಣ ದೇಣಿಗೆ ನೀಡುವಂತೆ ಮನವಿ ಮಾಡಿದರು.

ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ರಾಜ್ಯದಲ್ಲಿ 15 ಕ್ಕೂ ಹೆಚ್ಚು ಜಿಲ್ಲೆಗಳು ನೆರೆ ಹಾವಳಿಯಿಂದ ತತ್ತರಿಸಿವೆ. ಜನರು ಮನೆ, ಮಠ, ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೂ, ಕೇಂದ್ರ ಸರಕಾರ ಜಾಣ ಕುರುಡರಾಗಿ ವರ್ತಿಸುತ್ತಿದೆ ಎಂದು ಆಪಾದಿಸಿದರು.

ಕಳೆದ ಎರಡು ದಿನಗಳ ಹಿಂದೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಅಲ್ಲದೆ, ನಮ್ಮ ಅಧಿಕಾರಿಗಳು ತಂಡಕ್ಕೆ ಸರಿಯಾಗಿ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಹಾಗಾಗಿ ಕೇಂದ್ರದಿಂದ ಹೆಚ್ಚಿನ ನೆರವು ನಿರೀಕ್ಷಿಸಲು ಅಸಾಧ್ಯವಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಹೀಮ್ ರೆಹಮತುಲ್ಲಾ, ಮುನಿವೆಂಕಟರೆಡ್ಡಿ, ಎಸ್.ಎಂ.ಪಾಟೀಲ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News