ಸುಧಾರಿತ ವರ್ಗಾವಣೆ ಪ್ರಕ್ರಿಯೆ ಜಾರಿಗೆ ತರಲು ಕ್ರಮ: ಶಿಕ್ಷಣ ಸಚಿವ ಸುರೇಶ್ ಕುಮಾರ್

Update: 2019-08-28 15:24 GMT

ಬೆಂಗಳೂರು, ಆ.28: ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತು ಅನೇಕ ಶಿಕ್ಷಕರು, ಅದರಲ್ಲಿಯೂ ಶಿಕ್ಷಕಿಯರು ಮನವಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ವಿವರಿಸಿ ಕೆಲವು ನ್ಯಾಯಯುತ ಪ್ರಸ್ತಾವನೆಗಳನ್ನು ನನ್ನ ಮುಂದೆ ಇಟ್ಟಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕರ ದಿನಾಚರಣೆಯಂದು ಅತ್ಯುತ್ತಮ ಕನ್ನಡ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಾಜಿ ಶಿಕ್ಷಣ ಸಚಿವ ದಿವಂಗತ ಎಚ್.ಜಿ.ಗೋವಿಂದೇಗೌಡ ಹೆಸರಿನಲ್ಲಿ ನೀಡಲಾಗುವ ರಾಜ್ಯ ಪ್ರಶಸ್ತಿ ಆಯ್ಕೆಗೆ ಸಂಬಂಧಿಸಿದಂತೆ ಬುಧವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಈ ವರ್ಗಾವಣೆ ವ್ಯವಸ್ಥೆಯಲ್ಲಿರುವ ಕೆಲ ದೋಷಗಳನ್ನೂ ಗಮನಕ್ಕೆ ತಂದಿದ್ದಾರೆ. ಈ ಕೆಲವು ಗೊಂದಲಗಳನ್ನು ನಿವಾರಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿಯ ವ್ಯವಸ್ಥೆ ಕುರಿತು ಚಿಂತನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಯನ್ನು ಕೆಲವು ಗೊಂದಲಗಳ ನಿವಾರಣೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಬಹಳ ಬೇಗ ಸುಧಾರಿತ ವರ್ಗಾವಣೆ ಪ್ರಕ್ರಿಯೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ಬಹಳಷ್ಟು ಚರ್ಚೆ ಮತ್ತು ಪರಾಮರ್ಶೆ ನಡೆಸಿ, ಎಚ್.ಜಿ.ಗೋವಿಂದೇಗೌಡ ರಾಜ್ಯ ಪ್ರಶಸ್ತಿಗೆ ಬೆಳಗಾವಿ ವಿಭಾಗದ ಎರಡು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಒಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂದು ಸರಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News