ಐಎಂಎ ಹಗರಣ: ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2019-08-28 15:56 GMT

ಬೆಂಗಳೂರು, ಆ.28: ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿದೆ.

ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಂಜಯನಗರ ನಿವಾಸಿ ಎಸ್.ಎಂ.ಇಕ್ಬಾಲ್ ಅಹ್ಮದ್ ಮತ್ತಿತರರು ಸಲ್ಲಿಸಲಾಗಿರುವ ಐದು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸಿಬಿಐ ಪರ ವಾದಿಸಿದ ವಕೀಲ ಪ್ರಸನ್ನಕುಮಾರ್ ಅವರು, ಕೇಂದ್ರ ಸರಕಾರ ಐಎಂಎ ಪ್ರಕರಣದ ತನಿಖೆಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿ, ಎಸ್‌ಐಟಿಗೆ ಮುಂದಿನ ವಿಚಾರಣೆ ವೇಳೆ ನಗರದ ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಿಕ್ಕಿರುವ ನಕಲಿ ಬಂಗಾರದ ಗಟ್ಟಿಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವ ಬಗ್ಗೆ ವಿಸೃತ ವರದಿ ಸಲ್ಲಿಸಲು ಸೂಚಿಸಿತು.

ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ವಾದಿಸಿ, ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಿಯಾಗಿ ಐಎಎಸ್ ಅಧಿಕಾರಿ ಹರ್ಷವರ್ಧನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಪ್ರಕರಣದ ತನಿಖೆಗೆ ಸಿಬಿಐ ಯಾಕೆ ತಡ ಮಾಡುತ್ತಿದೆ ಎಂದು ಪ್ರಶ್ನಿಸಿದ ನ್ಯಾಯಪೀಠವು ಕೂಡಲೇ ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News