ಕಳ್ಳಭಟ್ಟಿ ಮದ್ಯದ ಹಾವಳಿ ತಡೆಗೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಚಿವ ನಾಗೇಶ್ ಸೂಚನೆ

Update: 2019-08-28 16:19 GMT

ಬೆಂಗಳೂರು, ಆ.28: ಕಳ್ಳಭಟಿ ಅಥವಾ ಕಲಬೆರಕೆ ಮದ್ಯದ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಮತ್ತು ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಚುರುಕುಗೊಳಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಬಕಾರಿ ಸಚಿವ ಎಚ್.ನಾಗೇಶ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಅಬಕಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇಲಾಖಾ ಕಾರ್ಯಚಟುವಟಿಗಳ ಕುರಿತು ಪ್ರಪ್ರಥಮ ಬಾರಿಗೆ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮದ್ಯ ಬಳಕೆದಾರರಿಗೆ ಆರೋಗ್ಯಕರ ವಾತಾವರಣದಲ್ಲಿ ಮದ್ಯದ ಸರಬರಾಜು ಆಗಬೇಕು ಎಂಬುದನ್ನು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಗಮನದಲ್ಲಿರಿಸಿಕೊಂಡು ಸುರಕ್ಷಿತವಲ್ಲದ ಮದ್ಯ ಬಳಕೆಯನ್ನು ನಿಯಂತ್ರಿಸಿ, ನಿಷೇಧಿಸುವತ್ತ ಕ್ರಮ ವಹಿಸಿ. ಪ್ರಸಕ್ತ ಸಾಲಿನ ಈವರೆಗಿನ ಮದ್ಯದ ಎತ್ತುವಳಿಯನ್ನು ವಿಶ್ಲೇಷಿಸಿ ರಾಜಸ್ವ ಸಂಗ್ರಹಣೆಯ ನಿರೀಕ್ಷಿತ ಗುರಿಯನ್ನು ಸಾಧಿಸಲು ಕಾರ್ಯತಂತ್ರ ರೂಪಿಸಿ, ಕಾರ್ಯಗತಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲಾಖೆಯ ಸೇವೆಗಳನ್ನು ಸಕಾಲ ಸೇವೆಯ ಮತ್ತು ಇ-ಆಡಳಿತದ ಮೂಲಕ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವತ್ತ ಕಾರ್ಯನಿರ್ವಹಿಸಿ ಪಾರದರ್ಶಕ ಮತ್ತು ಸುಗಮ ಆಡಳಿತವನ್ನು ನೀಡುವಂತೆ ಸಚಿವರು ನಿರ್ದೇಶನ ನೀಡಿದರು. ಅಬಕಾರಿ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು, ಭರ್ತಿ ಮತ್ತು ಖಾಲಿ ಹುದ್ದೆಗಳನ್ನು ಪರಿಶೀಲಿಸಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮತ್ತು ಪದೋನ್ನತಿ ಮೂಲಕ ಶೀಘ್ರವಾಗಿ ಭರ್ತಿ ಮಾಡಲು ಕ್ರಮ ವಹಿಸುವಂತೆಯೂ ಅವರು ಆದೇಶಿಸಿದರು. ಅಪರ ಅಬಕಾರಿ ಆಯುಕ್ತ ವೆಂಕಟರಾಜು ಸೇರಿ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News