ಡಾ.ಶಿವಕುಮಾರ ಸ್ವಾಮೀಜಿ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟಿಸಿದ ಮುಖ್ಯಮಂತ್ರಿ

Update: 2019-08-28 16:30 GMT

ಬೆಂಗಳೂರು, ಆ.28: ಜಯನಗರ ವಾರ್ಡ್ ವ್ಯಾಪ್ತಿಯ ಎಂ.ಎನ್.ಕೃಷ್ಣ ರಾವ್ ಉದ್ಯಾನದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶೆಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

ಉದ್ಘಾಟಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ನಾಡಿನ ಪೂಜ್ಯ ಗುರುಗಳಾದ ಶಿವಕುಮಾರಸ್ವಾಮೀಜಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಹಲವು ದಿನಗಳ ಹಿಂದೆಯೇ ಉದ್ಘಾಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಗಿತ್ತು ಎಂದು ಹೇಳಿದರು.

ಉದ್ಯಾನ ನಗರಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಇತ್ತೀಚೆಗೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ಸ್ಥಳಾವಕಾಶ ಇರುವ ಕಡೆ ಉದ್ಯಾನಗಳನ್ನು ನಿರ್ಮಿಸಲು ಸರಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ತಿಳಿಸಿದರು.

ಸರಕಾರ ಅಭಿವೃದ್ಧಿ ಪರವಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ನಮ್ಮ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬಿಬಿಎಂಪಿ ಆಯವ್ಯಯದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಹಾಗೂ ಧ್ಯಾನ ಕೇಂದ್ರ ನಿರ್ಮಾಣ ಮಾಡಲು ಅವಶ್ಯಕತೆ ಇರುವ 2.35 ಎಕರೆ ಜಾಗವನ್ನು ವಾರದೊಳಗಾಗಿ ಪಾಲಿಕೆಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಎಂ.ಎನ್.ಕೃಷ್ಣರಾವ್ ಉದ್ಯಾನವನವು ಬಹಳ ಹಳೆಯ ಉದ್ಯಾನವಾಗಿದ್ದು, 28 ಎಕರೆ ವಿಸ್ತೀರ್ಣ ಹೊಂದಿದೆ. ಲಾಲ್ ಬಾಗ್ ನಂತರ ಅತಿದೊಡ್ಡ ಉದ್ಯಾನ ಇದಾಗಿದೆ. ಉದ್ಯಾನದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ವಾಯು ವಿಹಾರಕ್ಕೆ ಬರುತ್ತಾರೆ. ಇಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್, ಮಕ್ಕಳಿಗೆ ಆಟದ ಅಂಗಳ, ವಿಶೇಷ ಚೇತನ ಮಕ್ಕಳಿಗೆ ಆಟಿಕೆಗಳನ್ನು ಅಳವಡಿಸಲಾಗಿದೆ. ಇದೀಗ ಹೊಸದಾಗಿ 2.60 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದರು.

ನಗರದಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಅವರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ವಾರ್ಡ್‌ಗಳಲ್ಲಿ ಉದ್ಯಾನ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಕಳೆದ ಒಂಬತ್ತು ವರ್ಷದಿಂದ ಜಯನಗರ ವಾರ್ಡ್ ಪ್ರತಿನಿಧಿಸುತ್ತಿದ್ದೇನೆ. ಇದೇ ರೀತಿ ಮುಂದೆಯೂ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು.

ಜಯನಗರ ವಾರ್ಡ್‌ನಲ್ಲಿ ಸೋಮೇಶ್ವನಾಥ ಕಲ್ಯಾಣಿ ಅಭಿವೃದ್ಧಿ, ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ, ಮೂರು ಉದ್ಯಾನ ನಿರ್ಮಾಣ, ಉದ್ಯಾನಗಳಲ್ಲಿ ಹೊರಾಂಗಣ ವ್ಯಾಯಾಮ ಉಪಕರಣಗಳ ಅಳವಡಿಕೆ, ಗ್ರಂಥಾಲಯ ಪುನರ್ ನವೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಡಾ.ಶಿವಕುಮಾರಸ್ವಾಮೀಜಿಯ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ಸಮಾರಂಭದಲ್ಲಿ ಸಿದ್ಧಗಂಗಮಠ ಪೀಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿ, ಉಪ ಮೇಯರ್ ಭದ್ರೇಗೌಡ, ಕ್ಷೇತ್ರದ ಮಾನ್ಯ ಶಾಸಕರುಗಳು, ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್‌ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

5 ಲಕ್ಷ ರೂ. ದೇಣಿಗೆ

ಸಮಾರಂಭದಲ್ಲಿ ಎಂ.ಎನ್.ಕೃಷ್ಣರಾವ್ ಪಾರ್ಕ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಐದು ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ನಿಧಿಗೆ ಚೆಕ್ ಮೂಲಕ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News