ಬಿಜೆಪಿ ಮುಖಂಡನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ: ವಿದ್ಯಾರ್ಥಿನಿ ಪತ್ತೆ ?

Update: 2019-08-29 03:53 GMT
ಸ್ವಾಮಿ ಚಿನ್ಮಯಾನಂದ

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಮಾಡಿದ ಎಲ್‍ಎಲ್‍ಎಂ ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ಈ ವಿದ್ಯಾರ್ಥಿನಿ ದೆಹಲಿಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದ್ದಾಳೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಗಸ್ಟ್ 24ರಂದು ಫೇಸ್‍ಬುಕ್ ಪೇಜ್‍ನಲ್ಲಿ ಚಿನ್ಮಯಾನಂದ ವಿರುದ್ಧ ಆರೋಪ ಮಾಡುವ ವಿಡಿಯೊವನ್ನು ಪೋಸ್ಟ್ ಮಾಡಿದ ಬಳಿಕ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು. ಆದರೆ ಪೊಲೀಸ್ ತಂಡ ಹೋಟೆಲ್‍ಗೆ ಭೇಟಿ ನೀಡುವ ಮುನ್ನವೇ ವಿದ್ಯಾರ್ಥಿನಿ ಆ ಹೋಟೆಲ್‍ನಿಂದ ತೆರಳಿದ್ದಳು ಎನ್ನಲಾಗಿದೆ.

"ಸಂತ ಸಮಾಜದ ದೊಡ್ಡ ಮುಖಂಡ" ಬೆದರಿಕೆ ಹಾಕಿರುವುದು ಮಾತ್ರವಲ್ಲದೇ ಹಲವು ವಿದ್ಯಾರ್ಥಿನಿಯರ ಜೀವನ ನಾಶ ಮಾಡುವ ಎಚ್ಚರಿಕೆ ನೀಡಿದ್ದಾರೆ ಎಂದು ಆಪಾದಿಸಿದ ಉತ್ತರ ಪ್ರದೇಶದ ಶಹಜಹಾನ್‍ಪುರ ಎಸ್‍ಎಸ್ ಕಾನೂನು ಕಾಲೇಜಿನ ಎಲ್‍ಎಲ್‍ಎಂ ವಿದ್ಯಾರ್ಥಿನಿಯ ವಿಡಿಯೊ ಸಂದೇಶ ವೈರಲ್ ಆಗಿತ್ತು. ಚಿನ್ಮಯಾನಂದ ಈ ಕಾಲೇಜಿನ ಅಧ್ಯಕ್ಷ. ಇದು ರಾಜಕಾರಣಿಯಿಂದ ಹಣ ವಸೂಲಿ ಮಾಡುವ ಪಿತೂರಿ ಎನ್ನುವುದು ಅವರ ವಕೀಲರ ವಾದ.

ವಿದ್ಯಾರ್ಥಿನಿಯ ಕರೆಯ ದಾಖಲೆಗಳನ್ನು ಪರಿಶೀಲಿಸಿದಾಗ ಈಕೆ ತನ್ನ ತಾಯಿಗೆ ದೆಹಲಿಯಿಂದ ಕರೆ ಮಾಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮಹತ್ವದ ಸುಳಿವುಗಳು ಸಿಕ್ಕಿವೆ. ಇದನ್ನು ಶೀಘ್ರವೇ ಬಗೆಹರಿಸಲಿದ್ದೇವೆ ಎಂದು ಉತ್ತರಪ್ರದೇಶ ಡಿಜಿಪಿ ಓ.ಪಿ.ಸಿಂಗ್ ಹೇಳಿದ್ದಾರೆ. ಈಗಾಗಲೇ ಹಲವು ಕಡೆಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ. ದೆಹಲಿಯ ದ್ವಾರಕಾ ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿಯನ್ನು ಪಡೆಯಲಾಗಿದ್ದು, ಪ್ರಕರಣವನ್ನು ಇತ್ಯರ್ಥಪಡಿಸುವ ಹಂತಕ್ಕೆ ಬಂದಿದ್ದೇವೆ ಎಂದು ಮತ್ತೊಬ್ಬ ಉನ್ನತ ಅಧಿಕಾರಿ ವಿವರ ನೀಡಿದ್ದಾರೆ. ಈ ಸಂಬಂಧ ಚಿನ್ಮಯಾನಂದನನ್ನು ಇನ್ನೂ ವಿಚಾರಣೆಗೆ ಗುರಿಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News