ಉ.ಪ್ರದೇಶ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಗುಂಪು ಹತ್ಯೆ ಪ್ರಕರಣ ದಾಖಲಿಸಲು ನಿರ್ಧಾರ

Update: 2019-08-29 14:12 GMT

ಲಕ್ನೊ, ಆ.29: ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಅಮಾಯಕರ ಮೇಲೆ ಗುಂಪು ದಾಳಿ , ಹಲ್ಲೆ ಮತ್ತು ಹತ್ಯೆ ಪ್ರಕರಣ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಗುಂಪು ದಾಳಿ ಪ್ರಕರಣದಲ್ಲಿ ಒಳಗೊಂಡಿರುವವರು ಹಾಗೂ ವದಂತಿ ಹಬ್ಬಿಸುವವರ ವಿರುದ್ಧ ಎನ್‌ಎಸ್‌ಎ(ರಾಷ್ಟ್ರೀಯ ಭದ್ರತಾ ಕಾಯ್ದೆ)ಯಡಿ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ಗುಂಪು ಹತ್ಯೆ ಪ್ರಕರಣಗಳನ್ನು ಪೊಲೀಸರು ಅತ್ಯಂತ ಗಂಭೀರವಾಗಿ ನಿರ್ವಹಿಸುತ್ತಿದ್ದಾರೆ. ಇದುವರೆಗೆ ರಾಜ್ಯದಲ್ಲಿ 46 ಪ್ರಕರಣ ವರದಿಯಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. 29 ಮಂದಿ ಗಾಯಗೊಂಡಿದ್ದು, 90 ಮಂದಿಯನ್ನು ಬಂಧಿಸಲಾಗಿದೆ. ಇದುವರೆಗೆ 32 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಜಿಪಿ ಒಪಿ ಸಿಂಗ್ ಹೇಳಿದ್ದಾರೆ.

ಈ ಮಧ್ಯೆ, ಬುಧವಾರವೂ ಉತ್ತರಪ್ರದೇಶದಲ್ಲಿ ಗುಂಪು ಹಲ್ಲೆ ಪ್ರಕರಣ ವರದಿಯಾಗಿದೆ. ಗೋರಖ್‌ಪುರದಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಥಳಿಸಿದ್ದರೆ, ಗಾಝಿಯಾಬಾದ್‌ನಲ್ಲಿ ಮಕ್ಕಳ ಕಳ್ಳಿ ಎಂಬ ಶಂಕೆಯಲ್ಲಿ ಮಧ್ಯವಯಸ್ಕ ಮಹಿಳೆಯ ಮೇಲೆ ಗುಂಪು ಹಲ್ಲೆ ನಡೆದಿದೆ. ಆ ಮಹಿಳೆ ತನ್ನ ಮೊಮ್ಮಗಳ ಜತೆ ಬರುತ್ತಿದ್ದಾಗ ಹಲ್ಲೆ ನಡೆಸಲಾಗಿದೆ. ಫತೇಹ್‌ಪುರದಲ್ಲಿ ಆರೋಗ್ಯ ಇಲಾಖೆಯ ತಂಡದ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ತಡೆಯಲು ಹೋದ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News