ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೇಮುಲಾ, ಪಾಯಲ್ ಹೆತ್ತವರು

Update: 2019-08-29 16:03 GMT

ಹೊಸದಿಲ್ಲಿ, ಆ.29: ದೇಶದ ವಿವಿಗಳು ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧರಿತ ತಾರತಮ್ಯ ಕೊನೆಗಾಣಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿಯ ಹೆತ್ತವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧರಿತ ತಾರತಮ್ಯದಿಂದ ನೊಂದು ರೋಹಿತ್ ವೇಮುಲಾ ಹಾಗೂ ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಪಿಎಚ್‌ಡಿ ಸಂಶೋಧಕರಾಗಿದ್ದ ವೇಮುಲಾ 2016ರ ಜನವರಿ 17ರಂದು , ಮುಂಬೈಯ ಟಿಎನ್ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ದಲಿತ ವಿದ್ಯಾರ್ಥಿನಿ ಪಾಯಲ್ ಟಡ್ವಿ ಈ ವರ್ಷದ ಮೇ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ಜಾತಿ ಆಧರಿತ ತಾರತಮ್ಯ ತೋರಲಾಗುತ್ತಿದೆ. ಇಂತಹ ಘಟನೆಗಳು ಸಂವಿಧಾನದ 14, 15, 16, 17 ಮತ್ತು 21ನೇ ವಿಧಿಯಲ್ಲಿ ಖಾತರಿ ಪಡಿಸಲಾಗಿರುವ ಸಮಾನತೆಯ ಹಕ್ಕು, ಸಮಾನ ಅವಕಾಶದ ಹಕ್ಕು, ತಾರತಮ್ಯದ ವಿರುದ್ಧದ ಹಕ್ಕು, ಅಸ್ಪಶ್ಯತೆ ನಿವಾರಣೆ ಹಾಗೂ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

  ಯುಜಿಸಿ ನ್ಯಾಯ ಅಧಿನಿಯಮ ಎಂದೇ ಹೆಸರಾಗಿರುವ ಯುಜಿಸಿ(ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯವನ್ನು ಪ್ರೋತ್ಸಾಹಿಸುವ) ಕಾಯ್ದೆ 2012 ದೇಶದಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಡೀಮ್ಡ್ ವಿವಿ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಯುಜಿಸಿ ನ್ಯಾಯ ಅಧಿನಿಯಮವನ್ನು ಅರ್ಥೈಸಿಕೊಂಡು ಜಾರಿಗೊಳಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರಕಾರ ಹಾಗೂ ಯುಜಿಸಿಗೆ ಸೂಚನೆ ನೀಡಬೇಕೆಂದು ಕೋರಲಾಗಿದೆ.

 ಅಲ್ಲದೆ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿವಿಗಳಲ್ಲಿ ಜಾತಿ ಆಧರಿತ ತಾರತಮ್ಯ ಘಟನೆಗಳ ವಿಚಾರಣೆಗೆ ಸಮಾನ ಅವಕಾಶ ಸಮಿತಿಯನ್ನು ರಚಿಸಲು ಹಾಗೂ ಸಮಿತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದವರಿಗೆ ಹಾಗೂ ಎನ್‌ಜಿಒ ಅಥವಾ ಸಾಮಾಜಿಕ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಲು ನಿರ್ದೇಶನ ನೀಡಬೇಕೆಂದು ವಿನಂತಿಸಲಾಗಿದೆ.

ಅಲ್ಲದೆ ಜಾತಿ ಆಧರಿತ ತಾರತಮ್ಯದ ಸಂತ್ರಸ್ತ ವಿದ್ಯಾರ್ಥಿಗಳು ದೂರು ನೀಡಲು ಸಾಧ್ಯವಾಗದ ರೀತಿಯ ವಾತಾವರಣ ನಿರ್ಮಿಸುವ ಆರೋಪಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

20 ದೂರು ದಾಖಲು

2004 ಬಳಿಕ ದೇಶದಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧರಿತ ತಾರತಮ್ಯದಿಂದ ನೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ 20 ದೂರು ದಾಖಲಾಗಿವೆ. ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಚಿಸಿರುವ ವಿವಿಧ ಸಮಿತಿಗಳು ನೀಡಿರುವ ವರದಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಜಾತಿ ನಿಂದನೆ, ಸ್ಕಾಲರ್‌ಶಿಪ್ ಪಡೆಯಲು ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News