ಭೀಮಾ ಕೊರೆಗಾಂವ್ ಪ್ರಕರಣ: ಜಪ್ತಿ ಮಾಡಿದ ಎಲ್ಲಾ ಪುಸ್ತಕಗಳು ದೋಷಾರೋಪಣೆಗೆ ಪೂರಕವಲ್ಲ ಎಂದ ಹೈಕೋರ್ಟ್

Update: 2019-08-29 17:05 GMT

ಮುಂಬೈ, ಆ.29: ಲಿಯೊ ಟಾಲ್‌ಸ್ಟಾಯ್ ಅವರ ಕೃತಿ ‘ವಾರ್ ಆ್ಯಂಡ್ ಪೀಸ್’ ಒಂದು ಶ್ರೇಷ್ಠ ಸಾಹಿತ್ಯಕ ಕೃತಿ ಎಂಬುದು ತಿಳಿದಿದೆ. ಅಲ್ಲದೆ ಎಲ್ಗಾರ್ ಪರಿಷದ್-ಕೊರೆಗಾಂವ್ ಭೀಮಾ ಪ್ರಕರಣದಲ್ಲಿ ಪೊಲೀಸರು ಜಫ್ತಿ ಮಾಡಿರುವ ಎಲ್ಲಾ ಪುಸ್ತಕಗಳೂ ದೋಷಾರೋಪಣೆಗೆ ಪೂರಕವೆಂದು ಭಾವಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

“ವಾರ್ ಆ್ಯಂಡ್ ಪೀಸ್ ಕೃತಿಯಂತಹ ಆಕ್ಷೇಪಾರ್ಹ ವಸ್ತುಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿರುವುದು ಯಾಕೆ” ಎಂದು ಭೀಮಾ-ಕೊರೆಗಾಂವ್ ಪ್ರಕರಣದ ಆರೋಪಿ ವೆರ್ನಾನ್ ಗೋನ್ಸಾಲ್ವಿಸ್‌ರನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶ ಸಾರಂಗ್ ಕೋತ್ವಾಲ್ ಬುಧವಾರ ಪ್ರಶ್ನಿಸಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿತ್ತು. ಇದಕ್ಕೆ ಟ್ವಿಟರ್‌ನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಆದರೆ ಗೋನ್ಸಾಲ್ವಿಸ್ ಅವರ ಮನೆಯಲ್ಲಿ ಜಪ್ತಿ ಮಾಡಲಾದ ಯಾವ ಪುಸ್ತಕಗಳನ್ನೂ ಸರಕಾರ ನಿಷೇಧಿಸಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದ ಸಹ ಆರೋಪಿ ಸುಧಾ ಭಾರದ್ವಾಜ್ ಅವರ ವಕೀಲರು ಹೇಳಿಕೆ ನೀಡಿ, ಬುಧವಾರ ನ್ಯಾಯಾಲಯದಲ್ಲಿ ಪ್ರಸ್ತಾವಿಸಲ್ಪಟ್ಟ ‘ವಾರ್ ಆ್ಯಂಡ್ ಪೀಸ್’ ಪುಸ್ತಕ ಬಿಸ್ವಜಿತ್ ರಾಯ್ ಎಂಬವರು ಸಂಗ್ರಹಿಸಿದ ಲೇಖನಗಳ ಕೃತಿಯಾಗಿದೆ. ಇದರ ಹೆಸರು ‘ದಿ ವಾರ್ ಆ್ಯಂಡ್ ಪೀಸ್ ಇನ್ ಜಂಗಲ್‌ಮಹಲ್ : ಪೀಪಲ್, ಸ್ಟೇಟ್ ಆ್ಯಂಡ್ ಮಾವೋಯಿಸ್ಟ್’ ಎಂದಾಗಿದೆ ಎಂದು ಹೇಳಿದರು.

 ಗೋನ್ಸಾಲ್ವಿಸ್ ಮನೆಯಲ್ಲಿ ಜಪ್ತಿ ಮಾಡಲಾದ ‘ರಾಜ್ಯ ಧಾಮನ್ ವಿರೋಧಿ’ ಎಂಬ ಶೀರ್ಷಿಕೆಯ ಸಿಡಿಯ ಬಗ್ಗೆ ಉಲ್ಲೇಖಿಸಿದ ನ್ಯಾಯಾಧೀಶರು, ಇದು ಸರಕಾರದ ವಿರುದ್ಧದ ಅಂಶವನ್ನು ಒಳಗೊಂಡಿದೆ. ಇದನ್ನು ಮನೆಯಲ್ಲಿ ಇಟ್ಟುಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು.

 ಗೋನ್ಸಾಲ್ವಿಸ್ ಮನೆಯಲ್ಲಿ ಜಪ್ತಿ ಮಾಡಲಾಗಿರುವ ಕೆಲವು ಪುಸ್ತಕಗಳ ಹೆಸರನ್ನು ಪೊಲೀಸರು ಓದಿ ಹೇಳಿದರು. ಮಾರ್ಕಿಸ್ಸ್ ಆರ್ಚೀವ್ಸ್, ಜೈ ಭೀಮ ಕಾಮ್ರೇಡ್, ಅಂಡರ್‌ಸ್ಟಾಂಡಿಂಗ್ ಮಾವೋಯಿಸ್ಟ್, ಆರ್‌ಸಿಪಿ ರಿವ್ಯೆ ಮುಂತಾದ ಪುಸ್ತಕಗಳು ಸೇರಿವೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News