Breaking News: ಸರಕಾರಿ ಸ್ವಾಮ್ಯದ 10 ಬ್ಯಾಂಕ್ ಗಳು 4 ಬ್ಯಾಂಕ್ ಗಳಾಗಿ ವಿಲೀನ: ಕೇಂದ್ರ ಸಚಿವೆ ನಿರ್ಮಲಾ ಘೋಷಣೆ

Update: 2019-08-30 18:01 GMT

ಹೊಸದಿಲ್ಲಿ,ಆ.30: ಅರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ನಿಸ್ತೇಜಗೊಂಡಿರುವ ಬ್ಯಾಂಕಿಂಗ್ ವಲಯದ ಬೆಳವಣಿಗೆಯನ್ನು ತ್ವರಿತ ಗೊಳಿಸಲು ಹಾಗೂ 5 ಟ್ರಿಲಿಯನ್ ಅರ್ಥಿಕತೆಯನ್ನು ಸಾಧಿಸುವ ಪ್ರಯತ್ನವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಾರ್ವಜನಿಕ ರಂಗದ 10 ಬ್ಯಾಂಕ್‌ಗಳ ಮಹಾವಿಲೀನವನ್ನು ಘೋಷಿಸಿದ್ದಾರೆ.

ಇದರೊಂದಿಗೆ 27 ಸಾರ್ವಜನಿಕರಂಗದ ಬ್ಯಾಂಕ್‌ಗಳ ಜಾಗದಲ್ಲಿ ಇನ್ನು ಮುಂದೆ 12 ಬ್ಯಾಂಕ್‌ಗಳು ಮಾತ್ರವೇ ಕಾರ್ಯಾ ಚರಿಸಲಿವೆ.

ಕರಾವಳಿ ಕರ್ನಾಟಕ ಪ್ರತಿಷ್ಠಿತ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದೆ. ಹಾಗೆಯೇ ಕರಾವಳಿ ಕರ್ನಾಟಕದ ಇನ್ನೊಂದು ಪ್ರತಿಷ್ಠಿತ ಬ್ಯಾಂಕ್ ಆಗಿರುವ ಕಾರ್ಪೊರೇಶನ್ ಬ್ಯಾಂಕ್ ಹಾಗೂ ಆಂಧ್ರಪ್ರದೇಶ ಮೂಲದ ಆಂಧ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಳ್ಳಲಿವೆ.

ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿರಂಗದ 10 ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದರು. ಈ ಹತ್ತು ಬ್ಯಾಂಕ್‌ಗಳು ವಿಲೀನ ಗೊಂಡ ಬಳಿಕ ನಾಲ್ಕು ಬ್ಯಾಂಕ್‌ಗಳಾಗಿ ಕಾರ್ಯಾಚರಿಸಲಿವೆ. ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲು ನೂತನ ತಲೆಮಾರಿನ ಬ್ಯಾಂಕುಗಳ ಸೃಷ್ಟಿಯು ಅನಿವಾರ್ಯ ವಾಗಿದೆಯೆಂದು ಅವರು ಹೇಳಿದರು.

ಒಟ್ಟು 17.5 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟನ್ನು ಹೊಂದಿರುವ ದೇಶದ ಬೃಹತ್ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಶನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಇಂಡಿಯಾ ಪರಸ್ಪರ ವಿಲೀನಗೊಳ್ಳಲಿವೆ. ಈ ವಿಲೀನದಿಂದಾಗಿ ಈ ಮೂರು ಬ್ಯಾಂಕ್‌ಗಳು ಭಾರತದ ಎರಡನೆ ಅತಿ ದೊಡ್ಡ ಬ್ಯಾಂಕಿಂಗ್ ಜಾಲವಾಗಲಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಬೃಹತ್ ಪ್ರಮಾಣದ ಸಾಮರ್ಥ್ಯ ಹಾಗೂ ಓರಿಯಂಟಲ್ ಬ್ಯಾಂಕ್‌ನ ತಂತ್ರಜ್ಞಾನ ಸಾಮರ್ಥ್ಯ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ, ಬಲಿಷ್ಠ ಠೇವಣಿ ಫ್ರಾಂಚೈಸಿ ಇವನ್ನು ಸಂಯೋಜಿಸುವ ಉದ್ದೇಶದಿಂದ ಇವುಗಳನ್ನು ಪರಸ್ಪರ ವಿಲೀನಗೊಳಿಸಲಾಗಿದೆಯೆಂದು ಸೀತಾರಾಮನ್ ತಿಳಿಸಿದರು.

ಕರ್ನಾಟಕದ ಕರಾವಳಿ ಮೂಲದ ಎರಡು ಬ್ಯಾಂಕುಗಳಾದ ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಒಟ್ಟು 15.20 ಲಕ್ಷ ಕೋಟಿ ರೂ. ವ್ಯವಹಾರದೊಂದಿಗೆ ಸಾರ್ವಜನಿಕ ರಂಗದ ನಾಲ್ಕನೆ ಅತಿ ದೊಡ್ಡ ಬ್ಯಾಂಕ್ ಆಗಲಿದೆ.

ಈ ಎರಡು ಬ್ಯಾಂಕುಗಳು ವಿಲೀನಗೊಂಡ ಬಳಿಕ ಅವು 10,342 ಶಾಖೆಗಳೊಂದಿಗೆ ಭಾರತದ ಮೂರನೆ ಅತಿ ದೊಡ್ಡ ಬ್ರಾಂಚ್ ನೆಟ್‌ವರ್ಕ್ ಆಗಲಿವೆ. ಈ ವಿಲೀನದೊಂದಿಗೆ ಬ್ಯಾಂಕಿಂಗ್ ನಿರ್ವಹಣಾ ವೆಚ್ಚದಲ್ಲಿ ಇಳಿಕೆಯಾಗಲಿದೆ ಎಂದು ಸೀತಾರಾಮನ್ ತಿಳಿಸಿದರು.

ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಮಾನವಾದ ಕಾರ್ಯನಿರ್ವಹಣಾ ಸಂಸ್ಕೃತಿಯನ್ನು ಹೊಂದಿವೆ. ಈ ಎರಡೂ ಬ್ಯಾಂಕುಗಳು ಹೊಂದಾಣಿಕೆಯಾಗುವಂತಹ ವಿತ್ತೀಯ ತಂತ್ರಜ್ಞಾನ ಬಳಕೆ ಮಾಡುತ್ತಿವೆ ಹಾಗೂ ತ್ವರಿತವಾಗಿ ಏಕೀಕರಣಗೊಳ್ಳಲು ಸಮರ್ಥವಾಗಿವೆ’’ ಎಂದು ವಿತ್ತ ಸಚಿವೆ ತಿಳಿಸಿದರು.

ಮೂರನೆ ವಿಲೀನ ಪ್ರಕ್ರಿಯೆಯಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಆಂಧ್ರಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕುಗಳು ಸಂಯೋಜನೆಗೊಳ್ಳಲಿದ್ದು, ಸಾರ್ವಜನಿಕರಂಗದ ಐದನೇ ಅತಿ ದೊಡ್ಡ ಬ್ಯಾಂಕ್ ಆಗಲಿದೆ. ಈ ಮೂರು ಬ್ಯಾಂಕ್‌ಗಳ ವಿಲೀನದಿಂದಾಗಿ ಒಟ್ಟು 14.9 ಲಕ್ಷ ಕೋಟಿ ರೂ. ವ್ಯವಹಾರವನ್ನು ಹೊಂದಲಿವೆ. ಒಟ್ಟು 9609 ಶಾಖೆಗಳನ್ನೊಳಗೊಂಡ ದೇಶದ ನಾಲ್ಕನೆ ಅತಿ ದೊಡ್ಡ ಬ್ಯಾಂಕ್ ಶಾಖಾ ಜಾಲವನ್ನು ಅವು ಹೊಂದಲಿವೆ.

 ನಾಲ್ಕನೆ ವಿಲೀನ ಪ್ರಕ್ರಿಯೆಯಡಿ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಒಟ್ಟು 8.08 ಲಕ್ಷ ಕೋಟಿ ರೂ.ವ್ಯವಹಾರದೊಂದಿಗೆ, ಸಾರ್ವಜನಿಕರಂಗದ ಏಳನೇ ಅತಿ ದೊಡ್ಡ ಬ್ಯಾಂಕ್ ಸೃಷ್ಟಿಯಾಗಲಿದೆ.ಈ ಮೂರು ಬ್ಯಾಂಕ್‌ಗಳು ಪೂರಕವಾದ ತಂತ್ರಜ್ಞಾನ ಸಾಮರ್ಥ್ಯವನ್ನು ಕೂಡಾ ಹೊಂದಿವೆ.

ರಾಷ್ಟ್ರಮಟ್ಟದಲ್ಲಿ ಬ್ಯಾಂಕ್‌ಗಳ ಬಲಿಷ್ಠವಾದ ಉಪಸ್ಥಿತಿ ಹಾಗೂ ಜಾಗತಿಕ ಮಟ್ಟದಲ್ಲಿ ಗ್ರಾಹಕರ ತಲುಪುವಿಕೆ ಬ್ಯಾಂಕ್‌ಗಳ ವಿಲೀನ ಯೋಜನೆಯ ಮುಖ್ಯಗುರಿಗಳಲ್ಲೊಂದಾಗಿದೆಯೆಂದು ಸೀತಾರಾಮನ್ ತಿಳಿಸಿದರು. ಈ ನಾಲ್ಕು ವಿಲೀನಗಳಿಂದಾಗಿ, ಸಾರ್ವಜನಿಕರಂಗದ ಬ್ಯಾಂಕುಗಳ ಒಟ್ಟು ವ್ಯವಹಾರದ ಶೇ.82ರಷ್ಟು ಹಾಗೂ ಎಲ್ಲಾ ವಾಣಿಜ್ಯ ಬ್ಯಾಂಕುಗಳ ಶೇ.56ರಷ್ಟು ವ್ಯವಹಾರ ಈ ಬ್ಯಾಂಕಿಂಗ್ ಸಂಸ್ಥೆಗಳ ಪಾಲಾಗಲಿದೆ ಎಂದು ನಿರ್ಮಲಾ ತಿಳಿಸಿದರು.

ಮೂರನೆ ವಿಲೀನ ಪ್ರಕ್ರಿಯೆಯ ಬಳಿಕ ದೇಶದಲ್ಲಿರುವ ಸಾರ್ವಜನಿಕರಂಗದ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿಯಲಿದೆ.

ಬ್ಯಾಂಕ್ ವಿಲೀನ ಇತಿಹಾಸ

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು 2017ರ ಎಪ್ರಿಲ್ 1ರಂದು ಮೋದಿ ಸರಕಾರ ಆರಂಭಿಸಿತ್ತು. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಸ್ಟೇಟ್‌ಬ್ಯಾಂಕ್ ಜೈಪುರ, ಸ್ಟೇಟ್‌ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ರಾಂಕ್ ಆಫ್ ಟ್ರಾವಂಕೂರು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ವಿಲೀನಗೊಳಿಸಲಾಯಿತು.

ಕಳೆದ ವರ್ಷ ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸಲಾಯಿತು.

ಈ ಬ್ಯಾಂಕ್‌ಗಳ ವಿಲೀನದ ಬಳಿಕ ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಅನುಪಾತದಲ್ಲಿ ಶೇ.6.9ರಷ್ಟು ಬೆಳವಣಿಗೆಯಾಗಿದೆ. ಈ ವಿಲೀನದಿಂದಾಗಿ ರಿಟೇಲ್ ಸಾಲದ ಬೆಳವಣಿಗೆಯಲ್ಲಿ 20.5 ಶೇಕಡ ಏರಿಕೆಯಾಗಿದೆ. ಇದರಿಂದಾಗಿ ಲಾಭದಾಯಕತೆ ಕೂಡಾ ಹೆಚ್ಚಾಗಿದೆ ಎಂದು ಸೀತಾರಾಮನ್ ಹೇಳಿದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸರಕಾರ ನೀಡಲಿರುವ ಒಟ್ಟು ಬಂಡವಾಳ:

ಪಂಜಾಬ್ ಆ್ಯಂಡ್ ನ್ಯಾಶನಲ್ ಬ್ಯಾಂಕ್- 16,000 ಕೋ.ರೂ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ-11,700ಕೋ.ರೂ.

ಬ್ಯಾಂಕ್ ಆಫ್ ಬರೋಡ-7,000ಕೋ.ರೂ.

ಇಂಡಿಯನ್ ಬ್ಯಾಂಕ್-2,500ಕೋ.ರೂ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್-3,800ಕೋ.ರೂ.

ಸೆಂಟ್ರಲ್ ಬ್ಯಾಂಕ್-3,300ಕೋ.ರೂ.

ಯೂಕೊ ಬ್ಯಾಂಕ್-2,100ಕೋ.ರೂ.

ಯುನೈಟೆಡ್ ಬ್ಯಾಂಕ್-1,600ಕೋ.ರೂ.

ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್-750ಕೋ.ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News