ಬಿಜೆಪಿಗೆ ಹೋದರೆ ತಪ್ಪು ಮಾಡಿದ್ದರೂ ಕ್ಷಮಾದಾನ ಸಿಗುತ್ತೆ: ದಿನೇಶ್ ಗುಂಡೂರಾವ್
ಬೆಂಗಳೂರು, ಆ.30: ದೇಶದಲ್ಲಿ ಪ್ರತಿಪಕ್ಷಗಳನ್ನು ನಿರ್ನಾಮ ಮಾಡಲು ಮುಂದಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಸರ್ವಾಧಿಕಾರ ಧೋರಣೆ ತಾಳುತ್ತಿದೆ. ಆದರೂ, ನಾವು ಮಾಡಿದ್ದೇ ಸರಿ ಅಂತ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕಳೆದ ಐದು ವರ್ಷಗಳಿಂದಲೂ ಪ್ರತಿಪಕ್ಷಗಳನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಕಿಡಿಗಾರಿದರು.
ಬಿಜೆಪಿಯವರ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಮಾಧ್ಯಮ, ಸಂಸ್ಥೆಗಳು, ಉದ್ಯಮಿಗಳನ್ನು ಹಣಿಯಲಾಗುತ್ತಿದೆ. ಸಿದ್ದರಾಮಯ್ಯ ಸರಕಾರ ಅಧಿಕಾರದಲ್ಲಿದ್ದಾಗ ರಮೇಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಕೆ.ಗೋವಿಂದರಾಜ್, ಕೆ.ಜೆ.ಜಾರ್ಜ್ ಸೇರಿದಂತೆ ಎಲ್ಲರ ಮೇಲೂ ಐಟಿ ದಾಳಿ ಮಾಡಲಾಗಿತ್ತು ಎಂದು ಅವರು ಹೇಳಿದರು. ಚುನಾವಣೆ ಸಂದರ್ಭದಲ್ಲಿಯೂ ಐಟಿ ದಾಳಿ ನಡೆಸಲಾಗಿತ್ತು. ಒಂದು ಸಂಸ್ಥೆ ಪಕ್ಷದ ಪರವಾಗಿ ಕೆಲಸ ಮಾಡಿದರೆ ಹೇಗೆ? ಗುಜರಾತ್ ಕಾಂಗ್ರೆಸ್ ಶಾಸಕರನ್ನು ಕರೆತಂದು ರಕ್ಷಿಸಿದ್ದಕ್ಕೆ ಕಳೆದ ಎರಡು ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆ ಶಾಸಕರು ಇಲ್ಲಿದ್ದ ಸಂದರ್ಭದಲ್ಲೇ ಶಿವಕುಮಾರ್ ಮೇಲೆ ಐಟಿ ದಾಳಿ ನಡೆಸಲಾಗಿತ್ತು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಯಡಿಯೂರಪ್ಪ ಶಾಸಕರಿಗೆ ಆಮಿಷವೊಡ್ಡುತ್ತಿರುವ ಆಡಿಯೋ ಕ್ಲಿಪ್ ಗಳು ಹೊರ ಬಂದಿದೆ. ಶಾಸಕ ಶ್ರೀನಿವಾಸಗೌಡ ಸದನದಲ್ಲಿಯೇ ಈಗಿರುವ ಡಿಸಿಎಂ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ವಿರುದ್ಧ 5 ಕೋಟಿ ರೂ. ಆಮಿಷವೊಡ್ಡಿದ ಆರೋಪ ಮಾಡಿದರು. ಅವರ ವಿರುದ್ಧ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.
ಐಟಿ ಹಾಗೂ ಈಡಿ ಮೇಲೆ ನಮಗೆ ನಂಬಿಕೆ ಹೋಗಿದೆ. ತನಿಖಾ ಸಂಸ್ಥೆಗಳ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗಿ ವರ್ತಿಸಿದರೆ ಹೇಗೆ? ಬಿಜೆಪಿಗೆ ಹೋದರೆ ತಪ್ಪು ಮಾಡಿದ್ದರೂ ಕ್ಷಮಾದಾನ ಸಿಗುತ್ತೆ. ಹೋಗದಿದ್ದರೆ ಪದೇ ಪದೇ ಅವರನ್ನು ಟಾರ್ಗೆಟ್ ಮಾಡಲಾಗುತ್ತೆ. ರಮೇಶ್ ಜಾರಕಿಹೊಳಿ ಮೇಲೆ ಐಟಿ ದಾಳಿಯಾಗಿತ್ತು. ಈಗ ಅವರ ವಿರುದ್ಧದ ಪ್ರಕರಣ ಎಲ್ಲಿ ಹೋಯ್ತು. ಬಿಜೆಪಿಗೆ ಬೆಂಬಲ ನೀಡುತ್ತಿದ್ದಂತೆ ಪ್ರಕರಣ ಕೈ ಬಿಟ್ರಾ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಶಾರದಾ ಸ್ಕ್ಯಾಂನಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಮುಕುಲ್ ರಾಯ್, ಹೇಮಂತ್ ಬಿಸ್ವಾಸ್, ಬಿಜೆಪಿಗೆ ಸೇರುತ್ತಿದ್ದಂತೆ ಅವರ ಪ್ರಕರಣ ಮುಕ್ತಾಯವಾಯಿತೆ? ಆಪರೇಷನ್ ಕಮಲದ ಮೇಲೆ ನೂರಾರು ಕೋಟಿ ಆರೋಪವಿದೆ. ಅದರ ಬಗ್ಗೆ ಯಾಕೆ ಐಟಿ ಪ್ರಕರಣ ದಾಖಲಿಸಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಶಿವಕುಮಾರ್ ಮೇಲೆ ದಾಳಿ ಮಾಡಿದ್ದಾಗ ಯಾರಾದರೂ ದೂರು ಕೊಟ್ಟಿದ್ರಾ? ಗೋವಿಂದರಾಜ್ ಮೇಲೆ ದಾಳಿ ನಡೆದಾಗ ದೂರು ಕೊಟ್ಟಿದ್ರಾ? ಸ್ವಯಂ ಪ್ರೇರಿತವಾಗಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈಗ ಆಪರೇಷನ್ ಕಮಲದ ಬಗ್ಗೆಯೂ ಹಾಗೇ ಕ್ರಮ ತೆಗೆದುಕೊಳ್ಳಿ ಎಂದು ಅವರು ಒತ್ತಾಯಿಸಿದರು.
ಶಿವಕುಮಾರ್ ಕಳಂಕ ರಹಿತರಾಗಿ ಹೊರ ಬರುತ್ತಾರೆ. ಬಿಜೆಪಿಯ ಎಲ್ಲ ಕುತಂತ್ರವನ್ನು ಬೇಧಿಸಿ ಹೊರ ಬರುತ್ತಾರೆ. ಅವರು ಮತ್ತಷ್ಟು ಶಕ್ತಿಶಾಲಿಯಾಗುತ್ತಾರೆ. ಈ ಎಲ್ಲ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತಾರೆ. ಸತ್ಯವನ್ನು ಜನರ ಮುಂದಿಡುತ್ತಾರೆ. ಮಾಧ್ಯಮಗಳು ಈ ಬಗ್ಗೆ ಸತ್ಯವನ್ನು ತಿಳಿಸುತ್ತಿಲ್ಲ. ಅವರಲ್ಲಿಯೂ ಆತಂಕವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಶಿವಕುಮಾರ್ ಬೆಂಬಲಕ್ಕೆ ಪಕ್ಷ ಪೂರ್ಣವಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರದ ಧೋರಣೆ ವಿರುದ್ಧ ಒಗ್ಗಟ್ಟಾಗಿ ಹೋರಾಡಲಿದೆ. ಹೋರಾಟದ ರೂಪುರೇಷೆಗಳನ್ನು ಶೀಘ್ರವೇ ರೂಪಿಸುತ್ತೇವೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ, ಮಾಜಿ ಸಂಸದ ಚಂದ್ರಪ್ಪ ಉಪಸ್ಥಿತರಿದ್ದರು.