ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕಿದೆ: ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು, ಆ. 30: ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ಪಾಲಿಸಿಯನ್ನು ಸಿದ್ಧಪಡಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ಶುಕ್ರವಾರ ಇಲ್ಲಿನ ಖನಿಜ ಭವನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕರ್ನಾಟಕ ಉದ್ಯೋಗ ಮಿತ್ರ ಕಚೇರಿ ಸಭಾಂಗಣದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹೂಡಿಕೆದಾರರಿಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ. ಹೀಗಾಗಿ ನಮ್ಮ ರಾಜ್ಯವನ್ನು ಕೈಗಾರಿಕಾ ಸ್ನೇಹಿಯನ್ನಾಗಿ ನಿರ್ಮಾಣ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದರು.
ಹೂಡಿಕೆದಾರರಿಗೆ ಪ್ರಮುಖವಾಗಿ ಭೂಮಿ ಲಭ್ಯತೆ ಹಾಗೂ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ನಿರೀಕ್ಷಿಸುತ್ತಾರೆ. ಭೂಮಿ ಹಂಚಿಕೆ ವಿಚಾರದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಅಲ್ಲಿನ ಜಿಲ್ಲಾಧಿಕಾರಿಗಳು ಯಾವ ಮಾನದಂಡದ ಮೇಲೆ ಭೂಮಿ ನೀಡಲಿದ್ದಾರೆ. ಈ ಬಗ್ಗೆ ಸೂಕ್ತ ಮಾನದಂಡ ಸಿದ್ಧಪಡಿಸಬೇಕಿದ್ದು, ಬಳಿಕ ಇದನ್ನು ಸಚಿವ ಸಂಪುಟದ ಮುಂದಿಡಲಾಗುವುದು. ಹೀಗಾಗಿ ಭೂ ಹಂಚಿಕೆ ಮಾನದಂಡವನ್ನು ಸಿದ್ಧಪಡಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳು ಇತ್ತೀಚಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೆಲಸ ಕಠಿಣ ನಿಯಮ ಹಾಗೂ ಗೊಂದಲದ ವಾತಾವರಣದಿಂದ ಸಣ್ಣ ಉದ್ಯಮಕ್ಕೆ ಕಾಲಿಡುವವರು ಹಿಂಜರಿಯುವ ಸ್ಥಿತಿ ಇದೆ. ಭೂ ಹಂಚಿಕೆಯಲ್ಲಿಯೇ ಈ ಉದ್ಯಮಕ್ಕೆ ಹೆಚ್ಚು ಹೊಡೆತ ಬೀಳುತ್ತಿದೆ. ಒಂದೊಂದು ಸಂಸ್ಥೆಗೂ ಒಂದೊಂದು ರೀತಿಯ ಬೆಲೆ ನಿಗದಿ ಅವೈಜ್ಞಾನಿಕವಾಗಿದೆ. ಹೀಗಾಗಿ ಸ್ಥಳಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡುವ ಬಗ್ಗೆ ಚಿಂತಿಸಬೇಕು. ಮಹಾರಾಷ್ಟ್ರ, ಗುಜರಾತ್, ಆಂಧ್ರ ಹಾಗೂ ಇತರೆ ರಾಜ್ಯಗಳಲ್ಲಿ ಕೆಎಸ್ಎಸ್ಐಡಿಸಿಗೆ ಯಾವ ರೀತಿಯ ನಿಯಮ ತಂದಿದ್ದಾರೆ ಹಾಗೂ ಅಲ್ಲಿನ ಪಾಲಿಸಿ ಬಗ್ಗೆ ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದರು.
ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಆಸಕ್ತರಿಗೆ ಇಲಾಖೆ ಸ್ನೇಹಪರವಾದ ನಿಯಮಗಳನ್ನು ನೀಡಬೇಕು. ಕೈಗಾರಿಕೆ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ಇತರೆ ಜಿಲ್ಲೆಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ನಿಯಮ ಸರಳೀಕರಣ ಮಾಡುವಂತೆ ಸೂಚಿಸಿದರು. ಜೊತೆಗೆ ಸುಲಭ ರೀತಿಯಲ್ಲಿ ಉದ್ಯಮ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಉ.ಕ.ಭಾಗದಲ್ಲಿ ಕೈಗಾರಿಕೆಗೆ ಪೂರಕ ವಾತಾವರಣವಿದೆ. ಹೂಡಿಕೆದಾರರಿಗೆ ಈ ಭಾಗದತ್ತ ಹೆಚ್ಚು ಆಕರ್ಷಿಸಲು ಅಧಿಕಾರಿಗಳು ಗಮನ ಹರಿಸಿಬೇಕು ಎಂದ ಅವರು, ಇನ್ನೂ ದಿನಗಳ ಬಳಿಕ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ ಎಂದರು. ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.