ನಕಲಿ ದಾಖಲೆ ಸೃಷ್ಟಿಸಿ ಮಾಜಿ ಮೇಯರ್ ಅಕ್ರಮ: ಎನ್.ಆರ್.ರಮೇಶ್ ಆರೋಪ

Update: 2019-08-30 14:54 GMT
ಎನ್.ಆರ್.ರಮೇಶ್

ಬೆಂಗಳೂರು, ಆ.30: ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್‌ ಮೂರ್ತಿ 15 ಕೋಟಿ ರೂ. ಮೌಲ್ಯದ ಬಿಡಿಎ ನಿವೇಶನವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿ, ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಿಎ ನಿವೇಶನವನ್ನು ಕಬಳಿಸಿರುವ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಡಿಎ ಆಯುಕ್ತರಲ್ಲಿ ಮನವಿ ಮಾಡಿದರು.

ಕುಮಾರಸ್ವಾಮಿ ಬಡಾವಣೆಯಲ್ಲಿ 12 ಸಾವಿರ ಚದರ ಅಡಿ ವಿಸ್ತೀರ್ಣದ 15 ಕೋಟಿ ರೂ. ಮೌಲ್ಯದ ಬಿಡಿಎ ನಿವೇಶನವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿ, ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಲ್ಲದೆ, ಬ್ಲಾಸಮ್ ಸ್ಕೂಲ್ ಶಾಲೆಯನ್ನು ಕಟ್ಟಿ, ಖಾಸಗಿಯವರಿಗೆ ಬಾಡಿಗೆ ನೀಡಿ ಲಕ್ಷಾಂತರ ರೂ. ವಸೂಲು ಮಾಡುತ್ತಿದ್ದಾರೆ. ಬಿಬಿಎಂಪಿ ಪದ್ಮನಾಭನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಪ್ರಕಾರ ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಕಬಳಿಸಿರುವ ಸಿಎ- 06ರ ನಿವೇಶನಕ್ಕೆ ಪಾಲಿಕೆಯಿಂದ ಯಾವುದೇ ಖಾತೆ ನೀಡಿರುವುದಿಲ್ಲ ಎಂದು ದೃಢೀಕರಣ ಪತ್ರವನ್ನು ಸಲ್ಲಿಸಿದ್ದಾರೆ ಎಂದು ದೂರಿದರು.

ಬ್ಲಾಸಮ್ ಸ್ಕೂಲ್ ಆಡಳಿತ ಮಂಡಳಿಗೆ ಎರಡು ವರ್ಷಗಳ ಹಿಂದೆಯೇ ನೋಟಿಸ್ ನೀಡಿ, ಬಿಡಿಎಯಿಂದ ಹಂಚಿಕೆಯಾಗಿರುವ ಹಂಚಿಕೆ ಪತ್ರ ಕಟ್ಟಡದ ಮಂಜೂರಾತಿ ನಕ್ಷೆ ಮತ್ತು ಶುದ್ಧ ಕ್ರಯಪತ್ರಗಳನ್ನು ಸಲ್ಲಿಸುವಂತೆ, ನೋಟಿಸ್ ನೀಡಿದ್ದರೂ, ಈವರೆಗೆ ಶಾಲಾ ಆಡಳಿತ ಮಂಡಳಿ ನೀಡಿಲ್ಲ. ಬಿಡಿಎ ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಬಿಡಿಎ ಸಿಎ ನಿವೇಶನವನ್ನು ಬ್ಲಾಸಮ್ ಸ್ಕೂಲ್‌ನ ಮಾಲಕರು ಕಬಳಿಸಿ, ಅನಧಿಕೃತ ಕಟ್ಟಡ ನಿರ್ಮಿಸಿದ್ದಾರೆ ಎಂದು ಈಗಾಗಲೇ ಹೇಳಿದ್ದಾರೆ ಎಂದು ತಿಳಿಸಿದರು.

ವೆಂಕಟೇಶ್‌ಮೂರ್ತಿ ವಿರುದ್ಧ ಮತ್ತು ಬ್ಲಾಸಮ್ ಸ್ಕೂಲ್ ಆಡಳಿತ ಮಂಡಳಿಯ ವಿರುದ್ಧ ಕಾನೂನು ಪ್ರಕಾರ ಸರಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ, ಅತಿಕ್ರಮ ಪ್ರವೇಶ, ವಂಚನೆ ಪ್ರಕರಣ, ಅಧಿಕಾರ ದುರುಪಯೋಗಕ್ಕೆ ಸಂಬಂಧ ಪಟ್ಟಂತೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಬಿಡಿಎ ಆಯುಕ್ತರಲ್ಲಿ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News