ಕೆಎಂಎಫ್ ಅಧ್ಯಕ್ಷರಾಗಿ ‌ಬಾಲಚಂದ್ರ ಜಾರಕಿಹೊಳಿ ‌ಅವಿರೋಧ ಆಯ್ಕೆ

Update: 2019-08-31 14:26 GMT

ಬೆಂಗಳೂರು, ಆ.31: ನಿರೀಕ್ಷೆಯಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್)ಯ ನೂತನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ‌ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ಕೆಎಂಎಫ್ ಪಕ್ಷಾತೀತವಾಗಿ ಮುನ್ನಡೆಸುತ್ತೇನೆ.‌ ರೈತರಿಗೆ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ಕಾಲಮಿತಿಯಲ್ಲಿ ದೊರೆಯುವಂತೆ ಮಾಡುವುದು ನನ್ನ ಮೊದಲ‌ ಆದ್ಯತೆ. ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಕಾಂಗ್ರೆಸ್, ಜೆಡಿಎಸ್ ನಾಯಕರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ಬೇಸರವಿಲ್ಲ: ಎಚ್.ಡಿ.ರೇವಣ್ಣ

 ಕೆಎಂಎಫ್ ಅಧ್ಯಕ್ಷ ಸ್ಥಾನ ತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ. ಜಾರಕಿಹೋಳಿ ನಮ್ಮ ಪಕ್ಷದಲ್ಲಿ ಇದ್ದವರು. ನನ್ನ ಜತೆ ಮಾತುಕತೆ ಮಾಡಿ ಬೆಂಬಲ ಕೋರಿದ್ದರು. ಅದಕ್ಕೆ ನಾನು ಒಪ್ಪಿಕೊಂಡಿದ್ದೇನೆ. ರೈತರಿಗೆ ಅನುಕೂಲವಾಗಬೇಕೆನ್ನುವುದು ನಮ್ಮ ಉದ್ದೇಶ. ನಮಗೆ ಯಾವ ಅಧಿಕಾರ ಬೇಡ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಕೆಎಂಎಫ್ ಅಧ್ಯಕ್ಷ ಸ್ಥಾನಾಕಾಂಕ್ಷಿ ಎಂದೇ ಬಿಂಬಿತವಾಗಿದ್ದ ಎಚ್.ಡಿ.ರೇವಣ್ಣ ಇದೀಗ ಅಧ್ಯಕ್ಷರ  ಆಯ್ಕೆ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಸಿಎಂ ಅಭಿನಂದನೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತ(ಕೆಎಂಎಫ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಚಂದ್ರ ಜಾರಹೊಳಿ ಅವರಿಗೆ ಹೃತ್ಪೂರ್ವಕ ಅಭಿನಂದನೆ. ಅವರ ನೇತೃತ್ವದಲ್ಲಿ ಕೆಎಂಎಫ್ ಉತ್ತಮವಾಗಿ ಕಾರ್ಯನಿರ್ವಹಿಸಿ, ಹಾಲು ಉತ್ಪಾದಕ ರೈತರಿಗೆ ಮತ್ತು ಗ್ರಾಹಕರಿಬ್ಬರಿಗೂ ಲಾಭ ದೊರೆಯಲೆಂದು ಆಶಿಸುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಕಾಂಗ್ರೆಸ್, ಜೆಡಿಎಸ್ ನಾಯಕರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ರೈತರಿಗೆ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ಕಾಲಮಿತಿಯಲ್ಲಿ ದೊರೆಯುವಂತೆ ಮಾಡುವುದು ನನ್ನ ಮೊದಲ ಆದ್ಯತೆ. ಕೆಎಂಎಫ್ ಅನ್ನು ಪಕ್ಷಾತೀತವಾಗಿ ಮುನ್ನಡೆಸುತ್ತೇನೆ.
-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News