ಚಂದ್ರನಿಗೆ ಮತ್ತೊಂದು ಸುತ್ತು ಹತ್ತಿರವಾದ ಚಂದ್ರಯಾನ-2

Update: 2019-08-31 14:33 GMT

ಬೆಂಗಳೂರು, ಆ.31: ಚಂದ್ರಯಾನ-2 ರ ಕಕ್ಷೆ ತಗ್ಗಿಸುವ ಕೆಲಸ ಶುಕ್ರವಾರ ಯಶಸ್ವಿಯಾಗಿ ನಡೆದಿದ್ದು, ಚಂದ್ರನಿಗೆ ನೌಕೆ ಇನ್ನೂ ಒಂದು ಸುತ್ತು ಹತ್ತಿರವಾಗಿದೆ. ರವಿವಾರ ಕೊನೆಯ ಹಂತದಲ್ಲಿ ಕಕ್ಷೆ ಸುತ್ತುವ ಕಾರ್ಯ ನಡೆಯಲಿದ್ದು, ಚಂದ್ರನಲ್ಲಿ ಇಳಿಯುವ ಕಾರ್ಯಕ್ಕೆ ಅಣಿಯಾಗಿದೆ.

ಮುಂದೇನು ನಡೆಯಲಿದೆ: ಸೆ.1 ರಂದು ರವಿವಾರ ಮುಸ್ಸಂಜೆ 6ರಿಂದ 7 ಗಂಟೆ ಹೊತ್ತಿನಲ್ಲಿ ಕೊನೆಯ ಹಂತದ ಕಕ್ಷೆ ಇಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ಚಂದ್ರನ ಅತಿ ಸನಿಹಕ್ಕೆ ನೌಕೆ ಹೋಗಲಿದ್ದು, ಗಂಟೆಗೆ 124 ಕಿ.ಮೀ. ವೇಗದಲ್ಲಿ ಅದು ಸುತ್ತಲಿದೆ. ಅಲ್ಲದೇ ಚಂದ್ರನಿಂದ ಸುಮಾರು 164 ಕಿ.ಮೀ. ದೂರದಲ್ಲಿ ನೌಕೆ ಇರಲಿದೆ.

ಸೆ.2 ರಂದು ಚಂದ್ರನ ಸುತ್ತುವ ನೌಕೆಯಿಂದ ಲ್ಯಾಂಡರ್ ಬೇರ್ಪಡಲಿದೆ. ಅಲ್ಲದೇ ಚಂದ್ರನ ಸನಿಹಕ್ಕೆ ಅಂದರೆ ಸುಮಾರು 100 ಕಿ.ಮೀಯಷ್ಟು ದೂರದಲ್ಲಿ ಇರಲಿದ್ದು, ತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳಲಿದೆ.

ಸೆ.7 ರಂದು ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ (ತನ್ನೊಳಗೆ ಚಲಿಸುವ 6 ಚಕ್ರದ ಯಂತ್ರ ರೋವರ್ ಕೂಡ ಹೊಂದಿದೆ) ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಯತ್ನ ಮಾಡಲಿದೆ. ಇಸ್ರೋದ ಇತಿಹಾಸದಲ್ಲೇ ಈ ಕ್ರಿಯೆ ಮೊದಲ ಬಾರಿಗೆ ನಡೆಯಲಿದೆ. ಚಂದ್ರನ ದಕ್ಷಿಣ ಧ್ರುವದ ಅತಿ ಶೀತ ಪ್ರದೇಶದಲ್ಲಿ ಲ್ಯಾಂಡರ್ ಇಳಿಯಲಿದೆ. ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣದ್ದಾಗಿದ್ದು, ಇಡೀ ಜಗತ್ತೇ ಈ ಕ್ಷಣಕ್ಕಾಗಿ ಕಾಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News