ಗಣೇಶ ಹಬ್ಬ: ಹೂ-ಹಣ್ಣು ದುಬಾರಿ

Update: 2019-09-01 17:38 GMT

ಬೆಂಗಳೂರು, ಸೆ.1: ರಾಜಧಾನಿಯಲ್ಲಿ ಗೌರಿ- ಗಣೇಶ ಹಬ್ಬದ ಪ್ರಯುಕ್ತ ಹೂವು ಮತ್ತು ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಸಮರ್ಪಕ ಪೂರೈಕೆ ಇಲ್ಲದೇ ಬೆಲೆಗಳು ಗಗನಕ್ಕೇರಿದೆ.

ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ, ದೇವನಹಳ್ಳಿ, ಗದಗ, ಬಳ್ಳಾರಿ, ಚಿತ್ರದುರ್ಗ ಹಾಗೂ ಹೊಸಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೂವುಗಳು ಬರುತ್ತಿವೆ. ಒಂದು ಕೆ.ಜಿ.ಕನಕಾಂಬರ ಹೂವು 2000 ರೂ. ಗಡಿ ದಾಟಿದ್ದು, ಹಬ್ಬದ ದಿನದಂದು ಮೂರು ಸಾವಿರ ರೂ. ಆಗುವ ಸಾಧ್ಯತೆ ಹೆಚ್ಚಾಗಿದೆ. ಬಾಳೆಕಂದುಗಳ ಬೆಲೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ 30 ರೂ. ರಿಂದ 60 ರೂ. ವರೆಗೆ ಹೆಚ್ಚಾಗಿದೆ. ಕೆ.ಆರ್.ಮಾರುಕಟ್ಟೆಗೆ 60ರಿಂದ 70 ಲೋಡ್, ಮಲ್ಲೇಶ್ವರಂ ಮಾರುಕಟ್ಟೆಗೆ 25 ಲೋಡ್ ಬಾಳೆಕಂದು ಬಂದರೂ, ಬೆಲೆ ಹೆಚ್ಚಳವಾಗಿದೆ. 3 ಅಡಿಯ ಬಾಳೆಕಂದಿಗೆ 50 ರೂ., 5 ಅಡಿಗೆ 80 ರೂ., 12 ಅಡಿ ಎತ್ತರದ ಬಾಳೆಕಂದಿಗೆ 300 ರೂ. ಇದ್ದು, ಈ ಬಾರಿಯ ಗಣೇಶ ಚತುರ್ಥಿ ಬಲು ತುಟ್ಟಿಯಾಗಿದೆ.

ಕೆ.ಆರ್.ಮಾರುಕಟ್ಟೆಯಲ್ಲಿ ದುಂಡು ಮಲ್ಲಿಗೆ 500 ರೂ., ಗುಲಾಬಿ 160 ರೂ., ಸಂಪಿಗೆ 200 ರೂ., ಸೇವಂತಿಗೆ 150 ರೂ. ಇದೆ. ಗೌರಿಬಿದನೂರಿನಿಂದ ಕನಕಾಂಬರ ಹೂ ಬರುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ದೇವನಹಳ್ಳಿ, ಹೊಸಕೋಟೆಯಿಂದ ಸಂಪಿಗೆ, ಗುಲಾಬಿ ಹೂ ಬರುತ್ತಿವೆ. ಗದಗ, ಬಳ್ಳಾರಿ, ಚಿತ್ರದುರ್ಗದಿಂದ ಹೂವುಗಳು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿ ಮಹೇಶ್.
ಹಣ್ಣುಗಳು ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಸೇಬು ಕೆ.ಜಿ.ಗೆ 150 ರೂ., ದಾಳಿಂಬೆ 120 ರೂ., ಸೀತಾಫಲ 130 ರೂ., ಮೊಸಂಬಿ 140 ರೂ., ಆಸ್ಟ್ರೇಲಿಯಾ ಮೊಸಂಬಿ 200 ರೂ., ಕಿತ್ತಳೆ 140 ರೂ., ಒಂದು ಫೈನಾಫಲ್ಗೆ 50 ರೂ. ಬೆಲೆ ಇದೆ. ಕಳೆದ ವಾರ ಹಣ್ಣುಗಳ ಬೆಲೆ ಕಡಿಮೆ ಇತ್ತು. ಆದರೆ ಇದೀಗ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಬ್ಬದ ದಿನಂದಂದು ಇನ್ನು ಹೆಚ್ಚಾಗಲಿದೆ. ಮಹಾರಾಷ್ಟ್ರದಿಂದ ದಾಳಿಂಬೆ, ಆಸ್ಟ್ರೇಲಿಯಾದಿಂದ ಮೊಸಂಬಿ ಬರುತ್ತಿದ್ದು, ರಾಜ್ಯದಿಂದ ಹೆಚ್ಚಿನ ಉತ್ಪನ್ನ ಬರುತ್ತಿಲ್ಲ ಆದ್ದರಿಂದ ಹಣ್ಣುಗಳ ದರವೂ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಶೌಕತ್.

ತರಕಾರಿ ಬೆಲೆ ಸ್ಥಿರ; ಅಂತರ್ ರಾಜ್ಯಕ್ಕೆ ರಫ್ತು
ರಾಜ್ಯದ ವಿವಿಧ ಜಿಲ್ಲೆಗಳಿಂದ ತರಕಾರಿ ಅಧಿಕ ಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ತರಕಾರಿ ಬೆಲೆ ಸ್ಥಿರವಾಗಿದೆ. ಜನರಿಗೆ ಕೈಗೆಟುಕುವ ದರದಲ್ಲಿ ತರಕಾರಿಗಳು ಸಿಗುತ್ತಿದ್ದು, ಪ್ರತಿದಿನ ಕೆ.ಆರ್.ಮಾರುಕಟ್ಟೆಯಿಂದ ಕೇರಳಕ್ಕೆ 5-9 ಲೋಡ್, ಆಂಧ್ರಪ್ರದೇಶಕ್ಕೆ 10 ಲೋಡ್, ತಮಿಳುನಾಡಿಗೆ 20-25 ಲೋಡ್, ಮುಂಬೈಗೆ 3 ಲೋಡ್ ತರಕಾರಿ ರಾಜ್ಯದಿಂದ ಹೋಗುತ್ತಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶರವಣ.

ಈ ಬಾರಿಯ ಗಣೇಶ ಚತುರ್ಥಿಗೆ ಈಗಾಗಲೇ ಇಷ್ಟು ಪ್ರಮಾಣದ ಹೂ ಬೇಕು ಎಂದು ಗ್ರಾಹಕರು ತಿಳಿಸಿದ್ದಾರೆ. ಆದ್ದರಿಂದ ಬೇಡಿಕೆ ಹೆಚ್ಚಿದೆ. ಆದರೆ ಪೂರೈಕೆ ಇಲ್ಲ. ನಾವು ಪ್ರತಿದಿನ 500 ಕೆ.ಜಿ ಹೂವು ಮಾರಾಟ ಮಾಡುತ್ತಿದ್ದೆವು. ಹಬ್ಬದಲ್ಲಿ 3,000 ಕೆ.ಜಿ. ಬೇಡಿಕೆ ಇದೆ. ಆದ್ದರಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
-ಮಹೇಶ್, ಹೂವಿನ ವ್ಯಾಪಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News