ಹಿಂದಿನ ಸರಕಾರದ ಯೋಜನೆಗಳಿಗೆ ತಡೆಯಿಲ್ಲ: ಸಚಿವ ವಿ.ಸೋಮಣ್ಣ

Update: 2019-09-03 14:20 GMT

ಬೆಂಗಳೂರು, ಸೆ.3: ವಸತಿ ಇಲಾಖೆಯಲ್ಲಿ ಹಿಂದಿನ ಸರಕಾರ ಜಾರಿಗೆ ತಂದಿರುವ ಯಾವುದೇ ಯೋಜನೆಗಳಿಗೆ ತಡೆ ನೀಡುವುದಿಲ್ಲ. ಬಡವರು ಹಾಗೂ ವಸತಿ ಹೀನರಿಗೆ ಸೂರು ಕಲ್ಪಿಸಲು ಎಲ್ಲ ಯೋಜನೆಗಳನ್ನು ಮುಂದುವರೆಸುವುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮಂಗಳವಾರ ವಿಕಾಸಸೌಧದ ಮೊದಲನೆ ಮಹಡಿಯಲ್ಲಿ ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಅರ್ಹರಿಗೂ ವಸತಿ ಸೌಲಭ್ಯ ಕಲ್ಪಿಸಬೇಕೆಂಬುದು ನಮ್ಮ ಸರಕಾರದ ಬದ್ಧತೆಯಾಗಿದೆ. ಅದಕ್ಕಾಗಿ ಅಗತ್ಯವಿರುವ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.

ನಾನು ಈ ಹಿಂದೆಯೂ ವಸತಿ ಇಲಾಖೆಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ, ಅವರ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಇದು ಅವರ ಅದೃಷ್ಟ. ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಸರಿಪಡಿಸುವ ಕೆಲಸವನ್ನು ಸರಕಾರ ಸಮರೋಪಾದಿಯಲ್ಲಿ ಮಾಡುತ್ತಿದೆ. ಕೇಂದ್ರ ಸರಕಾರವು ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬರುತ್ತೆ ಎಂದು ಹೇಳಿದ್ದಾರೆ. ಯಾವ ದೃಷ್ಟಿಕೋನದಿಂದ ಅವರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ, ನನ್ನ ಅನುಭವದ ಪ್ರಕಾರ ಮಧ್ಯಂತರ ಚುನಾವಣೆ ಬರುವುದಿಲ್ಲ ಎಂದು ಸೋಮಣ್ಣ ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯದವರು ವಿಚಾರಣೆಗೆ ಒಳಪಡಿಸಿರುವುದು ರಾಜಕೀಯ ಪ್ರೇರಿತವಲ್ಲ. ಸನ್ನಿವೇಶ, ಸಂದರ್ಭ ಹೇಗೆ ಇರುತ್ತದೋ ಹಾಗೆ ಎಲ್ಲವೂ ನಡೆಯುತ್ತದೆ. ಕಾಂಗ್ರೆಸ್ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಕೇಂದ್ರ ಸರಕಾರದ ವಿರುದ್ಧ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ಶಿವನಗೌಡ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News