ಸ್ಟೀವನ್ ಸ್ಮಿತ್‌ಗೆ ನಂ.1 ಸ್ಥಾನ ಬಿಟ್ಟುಕೊಟ್ಟ ಕೊಹ್ಲಿ

Update: 2019-09-03 18:36 GMT

ಮ್ಯಾಂಚೆಸ್ಟರ್, ಸೆ.3: ಭಾರತ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಬ್ಯಾಟಿಂಗ್ ಮಾಂತ್ರಿಕ ಸ್ಟೀವನ್ ಸ್ಮಿತ್‌ಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟ ಬಿಟ್ಟುಕೊಟ್ಟಿದ್ದಾರೆ.

ಇದೇ ವೇಳೆ ಭಾರತ ಉಪನಾಯಕ ಅಜಿಂಕ್ಯ ರಹಾನೆ ಏಳನೇ ಸ್ಥಾನಕ್ಕೆ ಭಡ್ತಿ ಪಡೆಯುವುದರೊಂದಿಗೆ ಅಗ್ರ-10ಕ್ಕೆ ವಾಪಸಾಗಿದ್ದಾರೆ. ವಿಂಡೀಸ್ ವಿರುದ್ಧ ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಹಾಗೂ ಶತಕ, ಜಮೈಕಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಮತ್ತೊಂದು ಉಪಯುಕ್ತ ಅರ್ಧಶತಕದ ಕೊಡುಗೆ ನೀಡಿದ್ದ ರಹಾನೆ ಇದೀಗ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

ವಿಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 289 ರನ್ ಸಂಗ್ರಹಿಸಿ ಗರಿಷ್ಠ ಸ್ಕೋರ್ ಗಳಿಸಿದ್ದ ಹನುಮ ವಿಹಾರಿ 40 ಸ್ಥಾನ ಭಡ್ತಿ ಪಡೆದು 30ನೇ ಸ್ಥಾನ ತಲುಪಿದ್ದಾರೆ. ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ ವಿಹಾರಿ ಮಹತ್ವದ ಸಾಧನೆ ಮಾಡಿದ್ದಾರೆ.

ಕೊಹ್ಲಿ ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ 76 ರನ್ ಗಳಿಸಿದ್ದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಕೇಮರ್ ರೋಚ್ ಅವರ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿ ಶೂನ್ಯ ಸಂಪಾದಿಸಿದರು.

ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸ್ಮಿತ್ ಮಂಗಳವಾರ ಪ್ರಕಟಿಸಿರುವ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಕೊಹ್ಲಿಗಿಂತ ಒಂದು ಅಂಕ ಮುನ್ನಡೆಯಲ್ಲಿದ್ದಾರೆ. ಬುಧವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಆ್ಯಶಸ್ ಟೆಸ್ಟ್‌ನಲ್ಲಿ 32ರ ಹರೆಯದ ಸ್ಮಿತ್‌ಗೆ ತನ್ನ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ.

 ಸ್ಮಿತ್ 2015ರ ಡಿಸೆಂಬರ್‌ನಿಂದ 2018ರ ಆಗಸ್ಟ್ ತನಕ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲೇ ಇದ್ದರು. ಸ್ಮಿತ್ ಕೇಪ್‌ಟೌನ್‌ನಲ್ಲಿ ದ.ಆಫ್ರಿಕ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಒಂದು ವರ್ಷ ನಿಷೇಧ ಎದುರಿಸಿದ ಸಂದರ್ಭದಲ್ಲಿ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದು ನಂ.1 ಸ್ಥಾನಕ್ಕೇರಿದರು.

ನಿಷೇಧ ಶಿಕ್ಷೆ ಅನುಭವಿಸಿ ಆಸ್ಟ್ರೇಲಿಯ ತಂಡಕ್ಕೆ ಸ್ಮಿತ್ ವಾಪಸಾದ ಸಂದರ್ಭದಲ್ಲಿ ನಂ.4ನೇ ಸ್ಥಾನದಲ್ಲಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಅವಳಿ ಶತಕ ಹಾಗೂ ಎರಡನೇ ಇನಿಂಗ್ ್ಸನಲ್ಲಿ 92 ರನ್ ಗಳಿಸಿದ್ದ ಸ್ಮಿತ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 63.2 ಸರಾಸರಿ ಕಾಯ್ದುಕೊಂಡಿದ್ದಾರೆ.

ವಿಶಾಖಪಟ್ಟಣದಲ್ಲಿ ಅಕ್ಟೋಬರ್ 2ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶಿ ಟೆಸ್ಟ್ ಸರಣಿಯ ಬಳಿಕ ಕೊಹ್ಲಿಗೆ ಸ್ಮಿತ್ ವಿರುದ್ಧ ಸವಾಲೊಡ್ಡುವ ಅವಕಾಶ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News