ಲಂಡನ್: ಪಾಕ್ ಪ್ರತಿಭಟನಾಕಾರರಿಂದ ಭಾರತೀಯ ಹೈಕಮಿಷನ್‌ನಲ್ಲಿ ದಾಂಧಲೆ

Update: 2019-09-04 04:19 GMT

ಲಂಡನ್: ಬ್ರಿಟನ್‌ನಲ್ಲಿ ವಾಸವಿರುವ 10 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರು ಲಂಡನ್‌ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಭಾರತೀಯ ಹೈಕಮಿಷನ್‌ನ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದರು. ರಾಜಧಾನಿಯಲ್ಲಿ ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬೃಹತ್ ಪ್ರತಿಭಟನೆ ಇದಾಗಿದೆ.

ಆದರೆ ಭಾರತೀಯ ಮೂಲದವರು ಇದಕ್ಕೆ ಪ್ರತಿಯಾಗಿ ಪ್ರತಿಭಟನೆ ನಡೆಸಲಿಲ್ಲ. ಲಂಡನ್‌ನ ಸಂಸತ್ ಚೌಕದಿಂದ ಹೈಕಮಿಷನ್ ಕಟ್ಟಡದವರೆಗೆ ನಡೆದ "ಪಾಕಿಸ್ತಾನ ಸ್ವಾತಂತ್ರ್ಯ ನಡಿಗೆ"ಯ ನೇತೃತ್ವವನ್ನು ಬ್ರಿಟನ್‌ನ ಲೇಬರ್ ಪಕ್ಷದ ಕೆಲ ಸಂಸದರು ವಹಿಸಿದ್ದರು. ಪಿಒಕೆ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು, "ಕಾಶ್ಮೀರದ ಮೇಲಿನ ದಾಳಿಯನ್ನು ನಿಲ್ಲಿಸಿ" ಎಂಬ ಫಲಕ ಹಿಡಿದಿದ್ದರು. "ನಮಗೆ ಸ್ವಾತಂತ್ರ್ಯ ಬೇಕು" ಎಂಬ ಘೋಷಣೆಗಳನ್ನು ಕೂಗಿದರು.

ದೇಶದ ಮೂಲೆ ಮೂಲೆಗಳಿಂದ ರೈಲುಗಳಲ್ಲಿ ಬಂದಿಳಿದ ಬ್ರಿಟಿಷ್ ಪಾಕಿಸ್ತಾನಿಯರು, ಭಾರತ ಸರ್ಕಾರ 370ನೇ ವಿಧಿ ರದ್ದುಗೊಳಿಸಿ, ನಿರ್ಬಂಧ ಹೇರಿ 30 ದಿನಗಳಾದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು.

ಭಾರತದ ಹೈಕಮಿಷನ್ ಗುರಿ ಮಾಡಿ ಪ್ರತಿಭಟನಾಕಾರರು ಮೊಟ್ಟೆ, ಟೊಮ್ಯಾಟೊ, ಶೂ, ಕಲ್ಲು, ಹೊಗೆಬಾಂಬ್ ಮತ್ತು ಬಾಟಲಿಗಳನ್ನು ಕಟ್ಟಡದತ್ತ ಎಸೆದರು, ಹಲವು ಕಿಟಕಿ ಗಾಜುಗಳನ್ನು ಒಡೆದುಹಾಕಿದರು. ಭಾರತೀಯ ಹೈಕಮಿಷನ್, ದಾಳಿಯಿಂದಾಗಿರುವ ಹಾನಿಯ ಚಿತ್ರಗಳನ್ನು ಟ್ವೀಟ್ ಮಾಡಿದೆ.

ಪಾಕಿಸ್ತಾನ ಮೂಲದ ಲಂಡನ್ ಮೇಯರ್ ಸಿದ್ದಿಕ್ ಖಾನ್ "ಈ ಸ್ವೀಕಾರಾರ್ಹವಲ್ಲದ ನಡತೆಯನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News