ಸದನದಲ್ಲಿ 'ಆಪರೇಷನ್ ಕಮಲ' ಕುರಿತು ಮಾತನಾಡಿದ್ದಕ್ಕೆ ಅಮಿತ್ ಶಾ ಸೇಡು ತೀರಿಸಿದ್ದಾರೆ: ಎಚ್.ಡಿ.ದೇವೇಗೌಡ

Update: 2019-09-04 12:39 GMT

ಬೆಂಗಳೂರು, ಸೆ.4: ಶಾಸಕ ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತವಾಗಿದ್ದು, ವಿಧಾನಸೌಧದಲ್ಲಿ ಸಮ್ಮಿಶ್ರ ಸರಕಾರ ವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ಬಿಜೆಪಿಯ ಆಪರೇಷನ್ ಕಮಲದ ಷಡ್ಯಂತ್ರದ ಕುರಿತು ಮಾತನಾಡಿದ್ದಕ್ಕಾಗಿ ಬಿಜೆಪಿ ವರಿಷ್ಠ ಅಮಿತ್ ಶಾ ಸೇಡು ತೀರಿಸಿಕೊಳ್ಳುತ್ತಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಬುಧವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ಬಿಜೆಪಿ ಹೇಗೆ ಅಪಹರಿಸಿತು, ಶಾಸಕರಿಗೆ ಎಷ್ಟೆಷ್ಟು ಹಣ ಕೊಟ್ಟು ಕುದುರೆ ವ್ಯಾಪಾರ ನಡೆಸಿದರು ಎಂಬ ಮಾಹಿತಿಯನ್ನು ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ವಿವರಿಸುವ ಮೂಲಕ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಈಡಿ ಸಂಸ್ಥೆಯ ಮೂಲಕ ಅವರಿಗೆ ಕಿರುಕುಳ ಮುಂದುವರೆಸಿದೆ ಎಂದು ಆರೋಪಿಸಿದರು.

ಜಾರಿ ನಿರ್ದೇಶನಾಲಯದ ತನಿಖೆಗೆ ಶಿವಕುಮಾರ್ ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದರು. ಹಬ್ಬದಂದು ಅವರ ಕುಟುಂಬದ ಕಾರ್ಯ ನೆರವೇರಿಸಲು ಸಹ ಅವಕಾಶ ನೀಡದೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿಷ್ಕರುಣೆಯಿಂದ ನಡೆದುಕೊಂಡಿದ್ದಾರೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾವನ್ನಪ್ಪಿದ ಹಿರಿಯರಿಗೆ ಪಿತೃಕಾರ್ಯ ಮಾಡುವುದು ನಮ್ಮಲ್ಲಿ ತುಂಬಾ ಶ್ರೇಷ್ಠವಾದದ್ದು, ಒಂದು ದಿನವೂ ವಿಚಾರಣೆಗೆ ತಪ್ಪಿಸಿಕೊಳ್ಳದೆ ಹಾಜರಾದರೂ ಹಿರಿಯರಿಗೆ ಎಡೆ ಇಡುವ ಕಾರ್ಯಕ್ಕೂ ಅವಕಾಶ ಕೊಡದೆ ನಿಷ್ಕರುಣೆಯಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆದುಕೊಂಡಿದ್ದಾರೆ.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News