ಇಂಜಿನಿಯರಿಂಗ್ ಕಾಲೇಜುಗಳು ತಂತ್ರಜ್ಞಾನ ಚಟುವಟಿಕೆಯ ಕೇಂದ್ರಗಳಾಗಬೇಕು: ಡಾ.ಅಶ್ವತ್ಥ ನಾರಾಯಣ್
ಬೆಂಗಳೂರು, ಸೆ.4: ದೇಶದಲ್ಲಿ ತಂತ್ರಜ್ಞಾನದ ಕ್ರಾಂತಿಯಾಗಬೇಕಾದರೆ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳೂ ತಂತ್ರಜ್ಞಾನ ಚಟುವಟಿಕೆ ಕೇಂದ್ರಗಳಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಕರೆ ನೀಡಿದರು.
ಬುಧವಾರ ನಗರದ ನಿಮ್ಹಾನ್ಸ್ ಕನ್ವೆನ್‌ಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ 7ನೇ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ ದೇಶದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳು ತಂತ್ರಜ್ಞಾನ ಚಟುವಟಿಕೆ ಹಾಗೂ ಅಭಿವೃದ್ಧಿ ಕೇಂದ್ರಗಳಾಗಿ ಬದಲಾಗಬೇಕು ಎಂದು ತಿಳಿಸಿದರು.
ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ, ಮೂಲಭೂತ ಸೌಲಭ್ಯ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಇನ್ನಿತರ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ. ಇನ್ನು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇದುವರೆಗೂ 75 ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಿರುವುದು ತಂತ್ರಜ್ಞಾನದ ಬೆಳವಣಿಗೆ ಸಂಕೇತ ಎಂದು ಹೇಳಿದರು.
ದೇಶದಲ್ಲಿ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳೇ ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರಗಳಾಗಿ ಮಾರ್ಪಟ್ಟಲ್ಲಿ ದೇಶದ ಅಭಿವೃದ್ಧಿ ಸುಲಭವಾಗಲಿದೆ. ಪ್ರಸ್ತುತ ಬೆಂಗಳೂರು ಸಣ್ಣ ಸಣ್ಣ ತಂತ್ರಜ್ಞಾನಗಳ ಕ್ಷೇತ್ರವಾಗಿ ಮಾರ್ಪಟ್ಟಿದೆ. ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದಲ್ಲಿ ಆಹಾರದ ಕೊರತೆಯಿತ್ತು. ಹಸಿರು ಕ್ರಾಂತಿ ಆರಂಭವಾದ ಮೇಲೆ ಕ್ರಮೇಣ ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೃಷಿಯಲ್ಲಿ ಬಳಸಿದ ಮಾದರಿ ತಂತ್ರಜ್ಞಾನ ಕಾರಣವಾಯಿತು ಎಂದು ತಿಳಿಸಿದರು.
ಸಮಾರಂಭದಲ್ಲಿ ಇಸ್ರೇಲ್ ರಾಷ್ಟ್ರೀಯ ಪರಿಷತ್‌ನ ಸಹ ಸಂಸ್ಥಾಪಕ ಪ್ರೊ.ಚೈಮ್ ಇಷದ್, ಎನ್‌ಆರ್‌ಎಎನ ಸಿಇಒ ಡಾ.ಅಶೋಕ್ ದಾಲ್ವಾಯ್, ಸಿಬಿಪಿಒ ಡಾ. ವೆಂಕಟಕೃಷ್ಣನ್ ಹಾಗೂ ಪ್ರೊ.ಆರ್.ಎಂ.ವಾಸಗಾಂ ಉಪಸ್ಥಿತರಿದ್ದರು.
ಇಸ್ರೇಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಟ್ಟದಲ್ಲಿಯೇ ಉಪಗ್ರಹ ಅಭಿವೃದ್ಧಿಪಡಿಸುವ ಸಾಹಸಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ನಮ್ಮ ರಾಜ್ಯ ಹಾಗೂ ದೇಶದಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಟ್ಟದಲ್ಲಿಯೇ ಇಸ್ರೇಲ್ ಮಾದರಿಯಲ್ಲೇ ತಂತ್ರಜ್ಞಾನ ಅಭಿವೃದ್ಧಿಯ ಕೌಶಲ್ಯ ವೃದ್ಧಿಸಬೇಕು.
-ಡಾ.ಅಶ್ವತ್ಥ ನಾರಾಯಣ್, ಡಿಸಿಎಂ