ಸಂವಿಧಾನ ಬದಲಿಸಿದರೆ ಸಂಪುಟದಿಂದ ಹೊರ ಬಂದು ಮೋದಿ ವಿರುದ್ಧವೇ ಹೋರಾಟ: ಕೇಂದ್ರ ಸಚಿವ ಅಠಾವಳೆ
ಬೆಂಗಳೂರು, ಸೆ.4: ರಾಜ್ಯಾದ್ಯಂತ ದಲಿತ ಕುಟುಂಬಗಳಿಗೆ ತಲಾ ಐದು ಎಕರೆ ಭೂಮಿಯನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ನಗರದ ಪುರಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘಟನೆಗಳ ಜಂಟಿಯಾಗಿ ಆಯೋಜಿಸಿದ್ದ ಜಾಗೃತಿ ಸಮಾವೇಶ ಹಾಗೂ ಕೇಂದ್ರ ಸಚಿವ ಅಠಾವಳೆಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ದೇಶದಲ್ಲಿ ಸುಮಾರು 20 ಕೋಟಿ ಎಕರೆಯಷ್ಟು ಹೆಚ್ಚುವರಿ ಭೂಮಿ ಇದೆ. ಅದನ್ನು ದಲಿತರಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲು ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಪರಿಶಿಷ್ಟ ಸಮುದಾಯಗಳಿಗೆ ಜಮೀನು ಹಂಚಿಕೆ ಸಂಬಂಧ ಕರ್ನಾಟಕ ಎಸ್ಸಿ, ಎಸ್ಟಿ ಭೂ ಪರಭಾರೆ ನಿಷೇಧ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಎಲ್ಲರಿಗೂ ಸಮಾನತೆ ಕಲ್ಪಿಸಿದ್ದಾರೆ. ಆದರೂ, ಮೇಲ್ಜಾತಿಯ ಕೆಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅದಕ್ಕಾಗಿ, ಇಂದಿನ ಕೇಂದ್ರ ಸರಕಾರ ಅವರಿಗೂ ಮೀಸಲಾತಿ ನೀಡಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದಾರೆ ಎಂದರು.
ಅಂಬೇಡ್ಕರ್ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಆಸ್ತಿ ಹಕ್ಕು ಸೇರಿದಂತೆ ಹಲವು ಹಕ್ಕುಗಳಿಗಾಗಿ ಹಿಂದೂ ಕೋಡ್ ಬಿಲ್ ಅನ್ನು ನೆಹರು ಸಂಪುಟದಲ್ಲಿ ಮಂಡಿಸಿದರು. ಆದರೆ, ಅವರು ಅದನ್ನು ಅಂಗೀಕರಿಸಲಿಲ್ಲ. ಆಗ ಅಂಬೇಡ್ಕರ್ ಸಂಪುಟದಿಂದ ಹೊರಬಂದರು. ಇಂದು ಮೋದಿಯು ತಮ್ಮ ಸಂಪುಟದಲ್ಲಿ ಅವಕಾಶ ನೀಡಿ, ನಮ್ಮ ಕಾರ್ಯಕ್ರಮಗಳಿಗೆ ಎಲ್ಲದಕ್ಕೂ ಅಂಗೀಕರಿಸುತ್ತಿದ್ದಾರೆ. ಇಂತಹ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿದರು.
ಇಂದಿನ ಕೆಲವು ಜಾತ್ಯತೀತ ಪಕ್ಷಗಳು, ಜಾತ್ಯತೀತವಾದಿಗಳು ಹಾಗೂ ಕಾಂಗ್ರೆಸ್ ಸೇರಿಕೊಂಡು ಮೋದಿ ಸಂವಿಧಾನವನ್ನು ಬದಲಿಸಲು ಬಂದಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗೇನಾದರೂ ಆದರೆ ನಾನು ಸಂಪುಟದಿಂದ ಹೊರ ಬಂದು, ಅವರ ವಿರುದ್ಧವೇ ಹೋರಾಟ ಮಾಡುತ್ತೇನೆ ಎಂದು ಅಠಾವಳೆ ಹೇಳಿದರು.
ರಿಪಬ್ಲಿಕ್ ಪಾರ್ಟಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ದೇಶದಲ್ಲಿ 70 ವರ್ಷಗಳು ಆಳ್ವಿಕೆ ನಡೆಸಿದ ಕಾಂಗ್ರೆಸ್ ಜನರನ್ನು ವಂಚಿಸಿದೆ. ದೇಶದ ಜನರ ಬದುಕಿಗಾಗಿ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮರಳು ಮಾಡಿದೆ ಎಂದು ಆಪಾದಿಸಿದರು.
ದೇಶದಲ್ಲಿ ಶಿಕ್ಷಣದಲ್ಲಿ ದಲಿತರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು. ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳ ಆಯ್ಕೆ ಸಂಬಂಧ ಮೀಸಲಾತಿ ಜಾರಿ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಅಲ್ಲದೆ, ದಲಿತರಿಗೆ ಎಲ್ಲದರಲ್ಲಿಯೂ ಸಮಾನ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಬಂತೇಜಿ, ದಲಿತ ಸಂಘಟನೆಗಳ ಮುಖಂಡರಾದ ರಾಮು, ಆರ್.ಎಂ.ಎನ್.ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೆ.9ರಂದು ವಿಧಾನಸೌಧ ಚಲೋ
ಕರ್ನಾಟಕ ಎಸ್ಸಿ, ಎಸ್ಟಿ ಭೂ ಪರಭಾರೆ ನಿಷೇಧ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳೊಂದಿಗೆ ಸೆ.9 ರಂದು ನಗರದ ಪುರಭವನದಿಂದ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೆಂಕಟಸ್ವಾಮಿ ಹೇಳಿದರು.