ಬೆಂಗಳೂರು: ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹ ಪತ್ತೆ

Update: 2019-09-04 15:05 GMT

ಬೆಂಗಳೂರು, ಸೆ.4: ಕಳೆದ ಐದು ದಿನಗಳ ಹಿಂದೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತದೇಹವನ್ನು ಬುಧವಾರ ಆರ್‌ಆರ್ ನಗರದ ಗ್ಲೋಬಲ್ ವಿಲೇಜ್ ಕಾಲೇಜು ಬಳಿಯ ರಾಜಕಾಲುವೆಯಲ್ಲಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಘಟನೆ ವಿವರ: ಸುನ್ನಿ ಸರ್ಕಲ್ ಬಳಿ ಶುಕ್ರವಾರ ರಾತರಿ ಮಹಮ್ಮದ್ ಝೈದ್ ಎಂಬ ಬಾಲಕ ಪಕ್ಕದ ಮನೆಯ ಹುಡುಗಿಯೊಂದಿಗೆ ರಾಜಕಾಲುವೆಗೆ ಕಸ ಹಾಕಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಕೊಚ್ಚಿ ಹೋಗಿದ್ದ. ಇದನ್ನು ನೋಡಿದ ಬಾಲಕಿ ಹೆದರಿ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಝೈದ್ ಮನೆಯವರು ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.

ರಾಜಕಾಲುವೆ ಬಳಿ ಇರುವ ಸಿಸಿಟಿವಿ ಪರಿಶೀಲಿಸಿದಾಗ ಬಾಲಕ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿರುವುದು ತಿಳಿದು ಬಂದಿತ್ತು. ಶನಿವಾರದಿಂದ ಬಿಬಿಎಂಪಿ ಹಾಗೂ ಅಗ್ನಿ ಶಾಮಕ ದಳದವರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರೂ ದೇಹ ಪತ್ತೆಯಾಗಿರಲಿಲ್ಲ. ಬುಧವಾರ ಮಧ್ಯಾಹ್ನ ಪಾದರಾಯನಪುರಕ್ಕೆ ಏಳೆಂಟು ಕಿಲೋ ಮೀಟರ್ ದೂರದಲ್ಲಿರುವ ರಾಜಕಾಲುವೆಯಲ್ಲಿ ಮಹಮ್ಮದ್ ಝೈದ್ ಮೃತದೇಹ ಪತ್ತೆಯಾಗಿದೆ.

ಬಿಬಿಎಂಪಿಯಿಂದ 10 ಲಕ್ಷ ಪರಿಹಾರ

ಪಾದರಾಯನಪುರ ಸಮೀಪದ ಪೈಪ್‌ಲೈನ್ ರಸ್ತೆಯಲ್ಲಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಬಿಬಿಎಂಪಿಯಿಂದ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಸ್ಥಳೀಯರು ರಾಜಕಾಲುವೆಗೆ ಅಳವಡಿಸಿರುವ ಕಬ್ಬಿಣದ ಫೆನ್ಸ್ ಕತ್ತರಿಸಿ ಕಸ ಸುರಿಯುತ್ತಿದ್ದಾರೆ. ಇದು ಸರಿಯಲ್ಲ. ಬಾಲಕ ಆಕಸ್ಮಿಕವಾಗಿ ಬಿದ್ದು ಕೊಚ್ಚಿ ಹೋಗಿದ್ದ. ಇದಕ್ಕೆ ವಿಷಾದಿಸುತ್ತೇನೆ.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News